ಗ್ರೀಸಿನ ಚರಿತ್ರೆ

	ಪಾಶ್ಚಾತ್ಯ ನಾಗರೀಕತೆಗೆ ಗ್ರೀಕರು ಸಲ್ಲಿಸಿದ ಕಾಣಿಕೆ ಅಪಾರವಾದದ್ದು. ಗ್ರೀಕರು ಪ್ರಾಚೀನ ಇತಿಹಾಸದ ಉತ್ತರಾಧಿಕಾರಿಗಳು. ಪಾಶ್ಚಾತ್ಯ ಸಂಸ್ಕøತಿ ಗ್ರೀಸಿನಲ್ಲಿ ಉಗಮಿಸಿತ್ತೆನ್ನಬಹುದು. ಪಾಶ್ಚಾತ್ಯ ವ್ಯವಸ್ಥೆಗೂ ಗ್ರೀಕರು ಕೊಡುಗೆ ವಿಶಿಷ್ಟವಾದ್ದು. ಅವರು ಸ್ವಾತಂತ್ರ್ಯ ಪ್ರಿಯರಾಗಿದ್ದರು. ಪ್ರಜಾಪ್ರಭುತ್ವ ಪದ್ಧತಿಯನ್ನು ಯಶಸ್ವಿ ಮಾಡಿದರು. ಸಾಹಿತ್ಯ ಕಲೆಗಳಲ್ಲೂ ಗ್ರೀಕರು ಅಸಾಧಾರಣ ಪ್ರಗತಿ ಹೊಂದಿದ್ದರು. ವಿಜ್ಞಾನ ಮತ್ತು ತತ್ತ್ವಶಾಸ್ತ್ರಗಳಲ್ಲಿ ಜನರ ವಿಚಾರಶಕ್ತಿ ಬೆಳೆಯಲು ಗ್ರೀಕರು ಬಹಳ ಶ್ರಮಿಸಿದರು. ವ್ಯಕ್ತಿಯ ಏಳಿಗೆಗೆ ಅಪಾರವಾಗಿ ಇವರ ನಗರರಾಷ್ಟ್ರಗಳು ಸಹಾಯಕವಾದವು. ನಾನಾ ಮುಖಗಳಲ್ಲಿ ಇವರು ಹೊಸ ಹಾದಿ ತುಳಿದು ವಿಶಿಷ್ಟವೂ ಸರ್ವತೋಮುಖವೂ ಆದ ನಾಗರಿಕತೆಯನ್ನು ಬೆಳೆಸಿದರು.

	ಗ್ರೀಸಿನ ಇತಿಹಾಸವನ್ನು ರೂಪಿಸುವಲ್ಲಿ ಅದರ ಸನ್ನಿವೇಶವೂ ಭೌತಲಕ್ಷಣಗಳು ವಾಯುಗುಣವೂ ಬಹಳ ಮುಖ್ಯಪಾತ್ರ ವಹಿಸಿವೆ. ದಕ್ಷಿಣ ಯೂರೋಪಿನಲ್ಲಿ ಈ ಪರ್ಯಾಯದ್ವೀಪ. ಬೆಟ್ಟಗುಡ್ಡಗಳಿಂದ ಕೂಡಿದೆ. ಅನೇಕ ಸಣ್ಣಪುಟ್ಟ ದ್ವೀಪಗಳಿಂದ ಸುತ್ತುವರಿಯಲ್ಪಟ್ಟಿದೆ. ಇಲ್ಲಿಯನ ಇಜೀಯನ್ ಸಮುದ್ರ ಪಶ್ಚಿಮ ಏಷ್ಯಕ್ಕೂ ಗ್ರೀಸಿಗೂ ವ್ಯಾಪಾರ ಸಂಪರ್ಕ ಮತ್ತು ಸಾಂಸ್ಕøತಿಕ ಸಂಪರ್ಕಗಳಿಗೆ ಸಹಾಯಕವಾಗಿತ್ತು. ಸುತ್ತಣ ಅನೇಕ ದ್ವೀಪಗಳು ಇಜೀಯನ್ ಮತ್ತು ಐಯೋನಿಯನ್ ಸಮುದ್ರಗಳೂ ಗ್ರೀಕರು ನೌಕಾಬಲವನ್ನು ಕಟ್ಟಿ ವ್ಯಾಪಾರವನ್ನು ವಿಸ್ತರಿಸಲು ಅನುಕೂಲವಾಗಿದ್ದವು. ಪೂರ್ವದಿಂದ ಸರೋನಿಕ ಖಾರಿಯೂ, ಪಶ್ಚಿಮದಿಂದ ಕಾರಿಂತ್ ಖಾರಿಯೂ ಗ್ರೀಸಿನ ಒಳಕ್ಕೆ ನುಗ್ಗಿ ದೇಶವನ್ನು ಉತ್ತರ ದಕ್ಷಿಣ ಮತ್ತು ಗ್ರೀಸ್‍ಗಳಾಗಿ ವಿಂಗಡಿಸಿದೆ. ದಕ್ಷಿಣೋತ್ತರವಾಗಿ ಹಬ್ಬಿರವ ಪಿಂಡಸ್ ಪರ್ವತ ಶ್ರೇಣಿ ಗ್ರೀಸ್ ದೇಶದ ಬೆನ್ನೆಲುಬಿನಂತಿದೆ. ಇದರ ಪಶ್ಚಿಮಕ್ಕೆ ಅನಾಗರಿಕರು ಅನೇಕ ಸಾರಿ ದಂಡೆತ್ತಿ ಬಂದರು. ಮ್ಯಾಸಿಡೋನಿಯ ಮತ್ತು ತೆಸಲಿ ಈ ಪರ್ವತದ ಈಶಾನ್ಯ ಭಾಗದಲ್ಲಿದೆ. ತೆಸಲಿಯ ಒಲಿಂಪಸ್ ಪರ್ವತಶ್ರೇಣಿ ಗ್ರೀಕ್ ಇತಿಹಾಸದಲ್ಲಿ ಹೆಸರಾದ್ದು. ಗ್ರೀಕ್ ದೇವತಗಳ. ವಾಸಸ್ಥಾನವೆಂಬ ಪ್ರತೀತಿಯಿಂದಾಗಿ ಇದು ಪವಿತ್ರವೆನಿಸಿತ್ತು. ಗ್ರೀಕರ ಸುಪ್ರಸಿದ್ಧ ಕ್ರೀಡೆಗಳು ಏರ್ಪಾಟಾಗುತ್ತಿದ್ದುದ್ದು ಇಲ್ಲೇ. ಮಧ್ಯ ಗ್ರೀಸಿನ ಡೆಲ್ಪೈ ನಗರದ ದಿವ್ಯವಾಣಿ ಅವರ ಭವಿಷ್ಯವನ್ನು ಸೂಚಿಸುತ್ತಿತ್ತು. ಗ್ರೀಕರ ಇತಿಹಾಸದಲ್ಲಿ ತರ್ಮಾಪಿಲೀ ಕಣಿವೆ ಬಹಳ ಪ್ರಸಿದ್ಧವಾಗಿದೆ. ಇದು ಶತ್ರುವಶವಾದರೆ ತಮ್ಮ ಸ್ವಾತಂತ್ರ್ಯಕ್ಕೆ ಧಕ್ಕೆ ಬರುವುದೆಂದು ಗ್ರೀಕರು. ಭಾವಿಸಿದ್ದರು. ಶತ್ರುಗಳು ಮುನ್ನುಗ್ಗದ ಹಾಗೆ ದೇಶವನ್ನು ಕಾಪಾಡುವುದರಲ್ಲಿ ಆಟಿಕ ಪ್ರಮುಖ ಪಾತ್ರ ವಹಿಸಿತ್ತು. ಇತಿಹಾಸಪ್ರಸಿದ್ಧವಾದ ಅಥೆನ್ಸ್ ನಗರ ಇರುವುದು ಗ್ರೀಸಿನಲ್ಲೇ. ಲ್ಯಾಕೋನಿಯದ ಸ್ಪಾರ್ಟ ನಗರರಾಷ್ಟ್ರಗಳ ಪ್ರಬಲ ಸೈನಿಕರಾಷ್ಟ್ರವಾಗಿ ಬೆಳೆಯಿತು. ಸುತ್ತಲಿನ ಪ್ರದೇಶಗಳಿಂದ ಭೌಗೋಳಿಕವಾಗಿ ಪ್ರತ್ಯೇಕವಾಗಿ, ಮೂರು ಕಡೆ ಸಮುದ್ರದಿಂದ ಬಳಸಲ್ಪಟ್ಟ ಗ್ರೀಸಿನ ಜನ ಒಳ್ಳೆಯ ನಾವಿಕರೂ ಸ್ವಾತಂತ್ರ್ಯ ವಾದಿಗಳು ಆಗಿ ಇತಿಹಾಸ ಪ್ರಸಿದ್ಧರಾದರು.

	ಗ್ರೀಕ್ ನಾಗರಿಕತೆಯ ಹಿನ್ನೆಲೆ: ಗ್ರೀಕರು ಮೊದಲು ನಾಗರಿಕತೆಯ ಬೆಳಕನ್ನು ಕಂಡದ್ದು ಕ್ರೀಟನರಿಂದ. ಕ್ರಿ.ಪೂ. 1600 ರಿಂದ 1200 ರ ವರೆಗೆ ಗ್ರೀಸಿನಲ್ಲಿ ಕ್ರೀಟನರ ತಾಮ್ರಯುಗದ ನಾಗರಿಕತೆ ಮತ್ತು ಸಂಸ್ಕøತಿ ಪ್ರವರ್ಧಮಾನವಾಗಿತ್ತು. ಆಗಿನ ಅವಶೇಷಗಳು ಮೈಸೀನೀ ಪಟ್ಟಣದಲ್ಲಿ ಬಹಳ ಮಟ್ಟಿಗೆ ಕಂಡುಬಂದದ್ದರಿಂದ ಇತಿಹಾಸಕಾರರು ಆ ಕಾಲವನ್ನು ಮೈಸೀನೀಯರ ಕಾಲವೆಂದು ಕರೆದಿದ್ದಾರೆ. ಗ್ರೀಸಿನ ಪ್ರಸಿದ್ಧ ಕವಿ ತನ್ನ ಬರೆವಣಿಗೆಯಲ್ಲಿ ಏಷ್ಯ ಮೈನರಿನಲ್ಲಿನ ಟ್ರಾಯ್, ಗ್ರೀಸಿನ ಮೈಸೀನೀ ಮತ್ತು ಕ್ರೀಟ್ ದ್ವೀಪಗಳನ್ನು ವರ್ಣಿಸಿದ್ದಾನೆ. ಪುರಾತತ್ವಜ್ಞರ ಶೋಧನೆಗಳಿಗೆ ಈ ವರ್ಣನೆ ಸಹಾಯಕವಾಯಿತು. 1870 ರಲ್ಲಿ ಜರ್ಮನ್ ವ್ಯಾಪಾರಿ ಷ್ಲೀಮನ್ನನೂ 1900 ರಲ್ಲಿ ಇಂಗ್ಲೆಂಡಿನ ಆರ್ಥರ್ ಎವಾನ್ಸ್‍ನೂ ಇಜೀಯನ್ ಪ್ರದೇಶದಲ್ಲಿ ಭೂಶೋಧನೆ ಮಾಡಿದರು. ಟ್ರಾಯ್, ಮೈಸೀನಿ, ಮತ್ತು ನಾಸಸ್ ಪಟ್ಟಣಗಳಲ್ಲಿ ಸಿಕ್ಕಿದ ಅವಶೇಷಗಳು ಒಂದೇ ಬಗೆಯಾಗಿದ್ದುದರಿಂದ ಒಟ್ಟಿನಲ್ಲಿ ಇದನ್ನು ಇಜೀಯನ್ ನಾಗರಿಕತೆ ಎಂದು ಕರೆಯಲಾಗಿದೆ. ಗ್ರೀಸಿನ ಇತಿಹಾಸದಲ್ಲಿ ಇದನ್ನು ಇಜೀಯನ್ ನಾಗರೀಕತೆ ಬಹಳ ಮುಖ್ಯವಾದ್ದು. ಕ್ರಿ.ಪೂ. 3000 ದಲ್ಲಿ ಪ್ರಾರಂಭವಾದ ಈ ನಾಗರಿಕತೆ, ತನ್ನ ಪ್ರಾಚೀನತೆಯಿಂದಾಗಿ ಶಿಲಾಯುಗಕ್ಕೆ ಸೇರಿದ್ದೆಂದು ಹೇಳಲಾಗಿದೆ. ಅಲ್ಲಿಯ ಜನ ವ್ಯಾಪಾರಿಗಳು. ಯುದ್ಧದಲ್ಲಿ ಭಲ್ಲೆ, ಕತ್ತಿಗಳನ್ನೂ ಚರ್ಮದ ಶಿರಸ್ತ್ರಾಣಗಳನ್ನೂ ಉಪಯೋಗಿಸುತ್ತಿದ್ದರು. ಇಜೀಯನರು ಚಿತ್ರಕಲೆಯನ್ನೂ ಬರೆವಣಿಗೆಯನ್ನೂ ತಿಳಿದಿದ್ದರೆಂದು ನಾಸಸ್ ನಗರದ ಉತ್ಖನನಗಳಿಂದ ತಿಳಿದುಬರುತ್ತದೆ. ವ್ಯವಸಾಯವೂ ಇವರ ಕಸುಬಾಗಿತ್ತು. ಇವರು ಪ್ರಕೃತಿದೇವತೆಯ ಪೂಜಕರಾಗಿದ್ದರು. ಸತ್ತವರಿಗೆ ಸಮಾಧಿ ಕಟ್ಟಿ, ಅದರ ಮೇಲೆ ಕೆತ್ತನೆಯ ಕೆಲಸ ಮಾಡುತ್ತಿದ್ದರು. ನಾಸಸ್ ಪಟ್ಟಣದಲ್ಲಿ ಅರಮನೆಯ ಅವಶೇಷಗಳು ಸಿಕ್ಕಿವೆ. ಅದರಲ್ಲಿ ಎರಡು, ಮೂರು, ಅಂತಸ್ತುಗಳು ಮಹಡಿಗಳು. ಒಳಗೆ ದೊಡ್ಡ ಪಡಸಾಲೆ, ಅನೇಕ ಕೊಠಡಿಗಳು, ಚಕ್ರವ್ಯೂಹಗಳುಳ್ಳ ಆವಾರಗಳು ಇವೆ. ಗೋಡೆ ಚಿತ್ರಾಲಂಕೃತ, ನೀರಿನ ಸರಬರಾಯಿ, ಚರಂಡಿ ವ್ಯವಸ್ಥೆ, ಸ್ನಾನದ ಕೊಠಡಿಗಳು - ಇವು ಕ್ರೀಟನರ ಜೀವನ ವೈಶಿಷ್ಟ್ಯವನ್ನು ತೋರಿಸುತ್ತವೆ. ಈ ವೈಭವಯುಕ್ತವಾದ ನಾಗರಿಕತೆ ಕ್ರಿ.ಪೂ. 1350 ರ ವೇಳೆಗೆ ಆಕಸ್ಮಾತ್ ನಾಶವಾಯಿತು.

	ಗ್ರೀಕರ ಆಗಮನ: ಕ್ರಿ.ಪೂ. 1200 ಕ್ರಿ.ಪೂ. 550 ರಲ್ಲಿ ಗ್ರೀಸ್ ದೇಶ ಇಜೀಯನ್ ಸಮುದ್ರದಾಚೆಯ ಟ್ರಾಯ್ ದೇಶ. ಏಷ್ಯ ಮೈನರಿನ ಅನೇಕ ಪ್ರದೇಶಗಳು, ಕಪ್ಪು ಸಮುದ್ರದ ದಕ್ಷಿಣ ತೀರದ ಭಾಗ ಮತ್ತು ಆಫ್ರಿಕದ ಮೆಡಿಟರೇನಿಯನ್ ಸಮುದ್ರತೀತಗಳನ್ನೊಳಗೊಂಡಿತ್ತು. ಆದರೆ ಗ್ರೀಕರು ಯಾರು? ಎಂದು ಹೇಳುವುದು ಕಷ್ಟ. ಇವರದು ಅನೇಕ ಪಂಗಡಗಳನ್ನೊಳಗೊಂಡ ಜನಾಂಗವಾಗಿತ್ತು. ಇವರ ಭಾಷೆ ಸಂಸ್ಕøತ, ಪರ್ಷಿಯನ್ ಭಾಷೆಗಳನ್ನೂ ಹೋಲುತ್ತಿದ್ದುದರಿಂದ ಇವರು ಆರ್ಯರ ಅಅಥವಾ ಇಂಡೋ - ಯೂರೋಪಿಯನರ ಬುಡಕಟ್ಟಿಗೆ ಸೇರಿದವರೆಂದು ಹೇಳಬಹುದು. ಕ್ರಿ.ಪೂ. 1100 ರಲ್ಲಿ ಉತ್ತರದ ಕಡೆಯಿಂದ ಅನಾಗರಿಕರಾದ ಡೋರಿಯನರು ನುಗ್ಗಿ ಬಂದು, ದಾಳಿ ನಡೆಸಿ, ಹೋದೆಡೆಯಲ್ಲೆಲ್ಲ ನಾಗರಿಕತೆಯ ಕುರುಹುಗಳನ್ನು ನಾಶಮಾಡಿದರು. ಅಕೀಯನರು ಒಂದು ಗುಂಪು ಕ್ರೀಟ್ ದ್ವೀಪವನ್ನು ಆಕ್ರಮಿಸಿಕೊಂಡು ಇಜೀಯನ್ ನಾಗರಿಕತೆಯನ್ನು ಪೂರ್ಣವಾಗಿ ನಾಶಮಾಡಿತು. ಮತ್ತೊಂದು ಗುಂಪಿನವರು ಟ್ರಾಯ್ ಪಟ್ಟಣವನ್ನು ವಶಪಡಿಸಿಕೊಂಡು ಪ್ರಿಜಿಯದಲ್ಲಿ ನೆಲಸಿ ಪ್ರಿಜಿಯನ್ನರೆಂದು ಹೆಸರಾದರು. ಇವರು ಮುಂದೆ ಟ್ರೋಜನರೆಂದೂ ಎನಿಸಿಕೊಂಡರು. ಹೀಗೆ ನಾನಾ ಗುಂಪುಗಳು ತಂಡತಂಡವಾಗಿ ವಲಸೆ ಬಂದು, ದಾಳಿ ಮಾಡಿ ಗ್ರೀಸಿನ ಎಲ್ಲೆಡೆಗಳಲ್ಲೂ ನೆಲೆಸಿದವು. ಇವರೆಲ್ಲ ಒಂದೇ ಬುಡಕ್ಕಟಿನವರು. ಒಂದೇ ಬಗೆಯ ಭಾಷೆ ಆಡುತ್ತಿದ್ದರು. ಇವರನ್ನು ಒಟ್ಟಿನಲ್ಲಿ ಗ್ರೀಕರು ಅಥವಾ ಹೆಲೆನರು ಎಂದು ಕರೆಯುತ್ತಾರೆ. ಪುರಾತನ ಕಾವ್ಯಗಳಲ್ಲಿ ಗ್ರೀಸ್ ದೇಶವನ್ನು ಹೆಲ್ಲಾಸ್ ಎಂದು ಕರೆಯಲಾಗಿದೆ. ಮೈಸೀನೀ ನಾಗರಿಕತೆಯನ್ನು ನಾಶಮಾಡಿದ ಅಕೀಯನರ ಅನಂತರದ ಇತಿಹಾಸವನ್ನು ತಿಳಿಯಲು ಹೋಮರ್ ಕವಿಯ ಇಲಿಯಡ್ ಮತ್ತು ಆಡಿಸಿ ಕಾವ್ಯಗಳೇ ಮೂಲಾಧಾರಗಳು. 

	ಗ್ರೀಕರ ದೇವೇಂದ್ರನೆನಿಸಿದ ಜ್ಯೂóಸ್ ದೇವತೆ ಟ್ಯಾಂಟಲಸನಿಗೆ ಜನ್ಮವಿತ್ತನೆಂದು ಒಂದು ಕತೆ ಪ್ರಚಾರದಲ್ಲಿದೆ. ಈತ ಫ್ರಿಜಿಯದ ಅರಸನಾದ. ಟ್ಯಾಂಟಲಸನ ಮಗ ಪಿ ಲಾಪ್ಸ್. ಆನಮೆಮ್ನಾನ್ ಮತ್ತು ಮೆನೆಲೇಯಸರು ಪೀಲಾಪ್ಸನ ಮಗನಾದ ಏಟ್ರಿಯಸನ ಮಕ್ಕಳು, ಟ್ಯಾಂಟಲಸನ ಮರಿಮಕ್ಕಳು. ಅಪ್ರತಿಮ ಯೋಧರೆನಿಸಿದ ಇವರು ಟ್ರೋಜನ್ ಕದನದಲ್ಲಿ ಭಾಗವಹಿಸಿದರು. ಟ್ರಾಯ್ ರಾಜಕುಮಾರ ಪ್ಯಾರೀಸ್ ಸ್ಪಾರ್ಟಾದ ಹೆಲೆನಳನ್ನು ಅಪಹಸಿಕೊಂಡು ಹೋಗಿದ್ದ. ಇದಕ್ಕೆ ಸೇಡು ತೀರಿಸಿಕೊಳ್ಳಲು ಗ್ರೀಕರು ಟ್ತಾಯ್ ನಗರವನ್ನು ಮತ್ತೆ ನಾಶಮಾಡಿದರು. ಇಲಿಯಡಿನ ಕಥಾವಸ್ತುವಿನದು. ಈ ಘಟನೆಯ ಅನಂತರ ಅಡಿಸಸ್ ವೀರ ಸ್ವದೇಶಕ್ಕೆ ಹಿಂದಿರುಗುವಾಗ ಅನುಭವಿಸಿದ ಕಷ್ಟಪರಂಪರೆಗಳ ಕಥ ಹೋಮರನ ಆಡಿಸಿಯಲ್ಲಿದೆ. ಈ ಎರಡು ಮಹಾಕಾವ್ಯಗಳ ಕರ್ತೃ ಹೋಮರ ಎನ್ನಲಾಗಿದೆ. ಈ ಮಹಾಕಾವ್ಯಗಳು ಗ್ರೀಕರೆಲ್ಲರಿಗೂ ಪೂಜ್ಯ ಗ್ರಂಥಗಳು, ಭಾರತದ ರಾಮಾಯಣ, ಮಹಾಭಾರತಗಳಂತೆ ಇವು ಗ್ರೀಕ್ ವೀರರ ಶೌರ್ಯ ಕಥನಗಳು. ಅಲ್ಲಿಯ ಹಾಡುಗಾರರು ಈ ಕಾವ್ಯಗಳನ್ನು ಹಾಡುತ್ತ ಊರಿಂದೂರಿಗೆ ಸಂಚರಿಸುತ್ತಿದ್ದರು. 6 ನೆಯ ಶತಮಾನದಲ್ಲಿ ಈ ಎರಡು ಕಾವ್ಯಗಳನ್ನು ಬರೆದಿಡಲಾಯಿತು. ಈ ಕಾವ್ಯಗಳಲ್ಲಿ ಗ್ರೀಸಿನ ಆಗಿನ ರಾಜಕೀಯ ಸಾಮಾಜಿಕ ಸ್ಥಿತಿಗತಿಗಳ ವರ್ಣನೆಯಿದೆ. ಆ ಕಾಲದಲ್ಲೇ ರಾಜತ್ವ, ಶ್ರೀಮಂತ ಪ್ರಭುತ್ವ ಮತ್ತು ಪ್ರಜಾಪ್ರಭುತ್ವಗಳು ಉಗಮಿಸುತ್ತಿದ್ದುವೆಂಬುದನ್ನು ಇವುಗಳಿಂದ ತಿಳಿದುಬರುತ್ತದೆ.

	ಗ್ರೀಸಿನ ಇನ್ನೊಬ್ಬ ಕವಿ ಹೆಸಿಯಡ್. ಈತ ಕ್ರಿ.ಪೂ. 750 - 700 ರಲ್ಲಿದ್ದ. ಈತ ಬರೆದಿರುವ ಎರಡು ಗ್ರಂಥಗಳ ಪೈಕಿ ಒಂದಾದ ತಿಯೊಗಮಿಯಲ್ಲಿ ಗ್ರೀಕರು ತಮ್ಮ ಅಸಂಖ್ಯಾತ ದೇವತೆಗಳಲ್ಲಿಟ್ಟಿದ್ದ ಭಯಭಕ್ತಿಗಳ ನಿರೂಪಣೆಯಿದೆ. ಮಾನವರಂತೆಯೇ ಗ್ರೀಕ್‍ದೇವತೆಗಳೂ ಆಟಪಾಟಗಳಲ್ಲಿ ತೊಡಗುತ್ತಿದ್ದರು. ಮಾನವ ಸಹಜವಾದ ವೈಮನಸ್ಯ, ಪ್ರೇಮ, ಕ್ರೌರ್ಯ ಪೂರಿತರು. ಹೇಡೀಸ್ ಅಧೋಲೋಕದ, ಪಿತೃಲೋಕದ ದೇವತೆ, ಏರೀಸ್ ಯುದ್ಧದೇವತೆ, ಅಪಾಲೊ ಬೆಳಕಿನ ಎಪೊಸಾಸ್ ಅಗ್ನಿಯ, ಡಯೊನಿಸಸ್ ಮದ್ಯದ, ಆಥೇನಾ ಕಲೆಯ. ಆಪ್ರೋಡೈಟಿ ಪ್ರೇಮದ ಅಧಿದೇವತೆಗಳು - ಹೇಡ್ಸನ ಮಕ್ಕಳು.

	ಅಕೀಯನರು ಮೈಸೀನೀಯರಿಗಿಂತ ಹೆಚ್ಚು ಒರಟು. ವ್ಯವಸಾಯ ಇವರ ಮುಖ್ಯ ಕಸುಬು. ಮೊದಮೊದಲು ಇವರ ಇಡೀ ಪರಿವಾರ ಉಳುವ ಭೂಮಿಯ ಮೇಲೆ ಸ್ವಾಮ್ಯ ಹೊಂದಿತ್ತು. ಕುಟುಂಬಕ್ಕೆ ಪಿತೃ ಪ್ರಧಾನನಾದರೂ ಅವನಿಗೆ ಜಮೀನನ್ನು ಮಾರುವ ಹಕ್ಕಿರಲಿಲ್ಲ. ಆದರೆ ಕ್ರಮೇಣ ಭೂಮಿಯನ್ನು ಶ್ರೀಮಂತರು ಕ್ರಯಕ್ಕೆ ಪಡೆದುಕೊಂಡರು. ಸಮುದ್ರ ವ್ಯಾಪಾರ ಸುಲಭವಾಗಿತ್ತು. ನಾಣ್ಯ ಪದ್ಧತಿ ಇನ್ನೂ ಅಸ್ತಿತ್ವಕ್ಕೆ ಬಂದಿರಲಿಲ್ಲ. ವಿನಿಮಯಕ್ಕೆ ಕಬ್ಬಿಣ, ಕಂಚು, ಚಿನ್ನದ ಚೂರುಗಳನ್ನು ಉಪಯೋಗಿಸುತ್ತದ್ದರು. ಯುದ್ಧಸಮಯದಲ್ಲಿ ಗುಂಪಿನ ಮುಖ್ಯಸ್ಥನೇ ಸರ್ವಾಧಿಕಾರಿಯಂತೆ ಪರಿವಾರ ಕ್ಷೇಮದ ಹೊಣೆ ಹೊರುತ್ತಿದ್ದ. ಪ್ರಜೆಗಳ ಬೆಂಬಲಕ್ಕಾಗಿ ಗುಂಪಿನ ಮುಖಂಡ ಅವರ ಸಭೆಯನ್ನು ಕರೆಯುತ್ತಿದ್ದ. ಅವರ ಆಭಿಪ್ರಾಯಿಕ್ಕೆ ಮನ್ನಣೆ ಇತ್ತು. ಮೊದಮೊದಲು ಈ ಮುಖಂಡನನ್ನು ಅಧಿಕಾರಚ್ಯುತನಾಗಿ ಮಾಡಬಹುದಿತ್ತು. ಆದರೆ ಕ್ರಮೇಣ ರಾಜತ್ವ ಅನುವಂಶಿಕವಾಯಿತು. ಆತನನ್ನು ಸಮಾಜದ ಸೇನಾನಿ, ನ್ಯಾಯಾಧೀಶ ಮತ್ತು ಪುರೋಹಿತನೆಂದು ಭಾವಿಸಲಾಯಿತು.

	ಟ್ರೋಜನ್ ಕದನದ ಬಳಿಕ ಗ್ರೀಸಿನಲ್ಲಿ ಅನೇಕ ಬದಲಾವಣೆಗಳುಂಟಾದವು. ಅಕೀಯನರ ಮೇಲೆ ದಾಳಿ ಮಾಡಿದ ಡೋರಿಯನರು ಇಲ್ಲಿ ನೆಲಸಿ ಇಲ್ಲಿಯ ಜನರೊಡನೆ ಬೆರೆತರು. ಇವರೊಡನೆ ಐಯೋನಿಯನರು ಸೇರಿದರು. ಇವರೆಲ್ಲ ಕೂಡಿ ಗ್ರೀಕರೆನಿಸಿಕೊಂಡರು. ಜನಸಂಖ್ಯೆಯ ಒತ್ತಡ ಹೆಚ್ಚಾಗಿದ್ದುದರಿಂದ ಸ್ವಾತಂತ್ರ್ಯ ಪ್ರೇಮಿಗಳಾದ ಗ್ರೀಕರು ಬೇರೆ ಕಡೆಗೆ ವಲಸೆ ಹೊರಟರು. ಕೆಲವರು ಇಜೀಯನ್ ಸಮುದ್ರವನ್ನು ದಾಟಿ ಏಷ್ಯ ಮೈನರಿನ ಕೆಲವು ಭಾಗಗಳಲ್ಲಿ ನೆಲೆಸಿಲದರು. ಕ್ರಿ.ಪೂ. 750 - ಕ್ರಿ.ಪೂ. 500 ವಸಾಹತುಗಳ ಕಾಲ. ಗ್ರೀಕರು ವಸಾಹತುಗಳಿಗೆ ರಾಜಕೀಯ, ಆರ್ಥಿಕ, ಸಾಮಾಜಿಕ, ವಾಣಿಜ್ಯಕ ಮುಂತಾದ ಅನೇಕ ಕಾರಣಗಳಿದ್ದವು. ಫಲವತ್ತಾದ ಮತ್ತು ವ್ಯಾಪಾರಕ್ಕೆ ಅನುಕೂಲವಿದ್ದ ಪ್ರದೇಶಗಳಲ್ಲಿ ಗ್ರೀಕ್ ವಸಾಹತುಗಳು ಹರಡಿದ್ದವು. ಗ್ರೀಕರು ನೆಲಸಿದಲ್ಲೆಲ್ಲ ಒಲಿಂಪಿಕ್ ಕ್ರೀಡಾಪಂದ್ಯಗಳು, ದಿವ್ಯವಾಣಿ, ಒಂದೇ ಭಾಷೆ, ಹೋಮರನ ವೀರ ಕಾವ್ಯಗಳಲ್ಲಿಯ ಪೂಜ್ಯ ಭಾವನೆ - ಇವು ಗ್ರೀಕ್ ಸಂಘಟನೆಯ ಮುಖ್ಯ ಅಂಶಗಳು. 

	ಈ ವಲಸೆಗಳ ಪರಿಣಾಮವಾಗಿ ಜನಜೀವನದಲ್ಲೂ ಮಾರ್ಪಾಡುಗಳಾದವು. ಹಿಂದಿನ ಗ್ರಾಮಜೀವನಕ್ಕೆ ಬದಲು ನಗರಜೀವನ ಆರಂಭವಾಯಿತು. ವ್ಯಾಪಾರೋದ್ಯಮಗಳು ಹೆಚ್ಚಿದಂತೆಲ್ಲ ಹಿಂದಿನ ಅದಲು ಬದಲು ಪದ್ಧತಿಗೆ ಬದಲು ನಾಣ್ಯದ ಉಪಯೋಗ ಜಾರಿಗೆ ಬಂದಿತು. ಆಡಳಿತದಲ್ಲಿ ಹೆಚ್ಚಿನ ಹತೋಟಿಯ ಆವಶ್ಯಕತೆ ಉಂಟಾಯಿತು. ಪ್ರತಿಯೊಂದು ನಗರವೂ ರಾಜ್ಯವೆನಿಸಿಕೊಂಡು ಪ್ರತ್ಯೇಕವಾದ ಸರ್ಕಾರವನ್ನು ಪಡೆಯಿತು. ಅಕ್ರಾಪೊಲಿಸ್ ನಗರ ಜೀವನದ ಕೇಂದ್ರ, ದುರ್ಗ. ನಗರರಾಜ್ಯದ ಉನ್ನತ ಪ್ರದೇಶದಲ್ಲಿ ಕೋಟೆಯನ್ನು ಕಟ್ಟಿ ಅದರಲ್ಲಿ ಆ ನಗರದ ರಾಜ ಪ್ರನುಖ ವಾಸಿಸುತ್ತಿದ್ದ. ಗ್ರೀಸ್ ದೇಶದ ಪರ್ವತಮಯವಾಗಿದ್ದುದರಿಂದ ಅಲ್ಲಿ ಒಳಸಂಚಾರ ಪ್ರಯಾಸಕರವಾಗಿತ್ತು. ಆದ್ದರಿಂದ ಗ್ರೀಕರು ವಿಶಾಲವಾದ ರಾಜ್ಯವನ್ನು ಕಟ್ಟಲಿಲ್ಲ. ನಗರರಾಜ್ಯವೇ ಅವರಲ್ಲಿಯ ಉಚ್ಚಮಟ್ಟದ ರಾಜಕೀಯ ಘಟಕವಾಯಿತು. ನಗರ ರಾಜ್ಯಗಳ ನಡುವೆ ಸಾಮಾನ್ಯವಾಗಿ ಕಲಹಗಳಿದ್ದುವು. ಸ್ಪಾರ್ಟ ಮತ್ತು ಆಥೆನ್ಸ್ ಪ್ರಮುಖ ನಗರರಾಜ್ಯಗಳು.

	ಹೋಮರನ ಕಾಲದಲ್ಲಿ ಗಣರಾಜ್ಯವ್ಯವಸ್ಥೆ ಅಸ್ತಿತ್ವದಲ್ಲಿತ್ತು. ಅನಂತರ ರಾಜ ಪ್ರಭುತ್ವ ಜಾರಿಗೆ ಬಂತು. ರಾಜ ನಿರಂಕುಶಾಧಿಕಾರಿಯಾಗಿದ್ದ. ಅವನಿಗೆ ಆಡಳಿತ ವಿಷಯದಲ್ಲಿ ಸಲಹೆ ನೀಡಲು ಕುಲಗಳ ಮುಖ್ಯಸ್ಥರನ್ನೊಳಗೊಂಡ ಮಂತ್ರಾಲೋಚಕ ಸಭೆಯೊಂದಿತ್ತು. ಸ್ವತಂತ್ರ ಪೌರರನ್ನೊಳಗೊಂಡ ಒಂದು ಪ್ರಜಾಪ್ರತಿನಿಧಿ ಸಭೆಯೂ ಇತ್ತು. ಇದು ತನ್ನ ಬೇಡಿಕೆಗಳನ್ನೂ ಸೂಚನೆಗಳನ್ನೂ ಹಿರಿಯರ ಸಭೆಗೆ ಅನುಮೋದನೆಗೆ ಕಳುಹಿಸುತ್ತಿತ್ತು. ಅದರೂ ಕ್ರಮೇಣ ರಾಜ ದರ್ಪಿಷ್ಟನಾಗಿ ಪ್ರಜಾಪೀಡಕನಾದಾಗ ಜನ ಅವನನ್ನು ವಿರೋಧಿಸಿದರು. ಕ್ರಿ.ಪೂ. 8 ನೆಯ ಶತಮಾನದ ವೇಳೆಗೆ ರಾಜತ್ವ ಕ್ಷೀಣಿಸಿ ನಗರದ ಶ್ರೀಮಂತ ಪ್ರಜೆಗಳು ಆಡಳಿತ ನಿರ್ವಹಣೆಯನ್ನು ವಹಿಸಿದರು. ಶ್ರೀಮಂತವರ್ಗ ರಾಜನನ್ನು ಹೊರದೂಡುವುದರ ಮೂಲಕವೇ ರಾಜನನ್ನು ಆರಿಸುವುದರ ಮೂಲಕವೇ ಅನುವಂಶಿಕ ರಾಜಪದ್ಧತಿಯನ್ನು ತೊಲಗಿಸಿತು. ರಾಜ ರಾಜ್ಯದ ಇತರ ಅಧಿಕಾರಿಗಳಂತೆ ಒಬ್ಬ ಅಧಿಕಾರಿಯಾದ.

	ಕಾನೂನುಗಳ ಕ್ರೋಢೀಕರಣ ಶ್ರೀಮಂತ ಪ್ರಭುತ್ವದ ವಿಶಿಷ್ಟ ಕೊಡುಗೆ. ಮೊದಮೊದಲು ಕಾನೂನುಗಳು ಲಿಖಿತರೂಪದಲ್ಲಿಲ್ಲದೆ ಸಾಂಪ್ರದಾಯಿಕವಾಗಿದ್ದಾಗ, ಅವನ್ನು ತನಗೆ ಅನುಕೂಲವಾಗಿ ಅರ್ಥವಿಸುವ ಹಕ್ಕನ್ನು ಶ್ರೀಮಂತವರ್ಗ ಪಡೆದಿತ್ತು. ಆದರೆ ಕ್ರಮೇಣ ಪ್ರಜೆಗಳು ಈ ಪದ್ಧತಿಯನ್ನು ವಿರೋಧಿಸಿದಾಗ ಕಾನೂನುಗಳನ್ನು ಕ್ರೋಢೀಕರಿಸುವ ಕಾರ್ಯ ಆರಂಭವಾಯಿತು. ಇವು ಅಪರಾಧ, ದಂಡಗಳಿಗಷ್ಟೇ ಸೀಮಿತವಾಗಿರದೆ ಜನರ ಆಚಾರ, ಅಭಿರುಚಿ, ಉಡುಗೆ ತೊಡುಗೆಗಳಲ್ಲೂ ನಿರ್ದಿಷ್ಟವಾದ ಕಟ್ಟಳೆಗಳನ್ನು ರೂಪಿಸತೊಡಗಿದವು. ಇದರಿಂದ ಕಾನೂನುಗಳೇ ಹೊರತು ಸಂವಿಧಾನವಾಗಿರಲಿಲ್ಲವೆಂಬುದು ಗಮನಿಸಬೇಕಾದ ಸಂಗತಿ. 

	ಆದರೆ ಈ ಪ್ರಭುತ್ವವೂ ಬಹುಕಾಲ ಬಾಳಲಿಲ್ಲ. ವಾಣಿಜ್ಯಾಭಿವೃದ್ಧಿಯಿಂದ ದೇಶ ಶ್ರೀಮಂತವಾಯಿತಾದರೂ ಆ ಶ್ರೀಮಂತಿಕೆಯಲ್ಲಿ ಎಲ್ಲರಿಗೂ ಪಾಲು ಇರಲಿಲ್ಲ. ಅಧಿಕಾರವನ್ನು ದುರುಪಯೋಗಪಡಿಸಿಕೊಂಡ ಶ್ರೀಮಂತರು ರೈತರ ಹಿತಗಳನ್ನು ನಿರ್ಲಕ್ಷಿಸಿದರು. ಪ್ರಜಾಶೋಷಣೆ ಸಾಮಾನ್ಯ ಜನತೆಯನ್ನು ಕಂಗೆಡಿಸಿತು. ಬಡತನ ಹೆಚ್ಚಾಗಿ ಬಡವರು ಗುಲಾಮರಾದರು. ಇದೆಲ್ಲ ಶ್ರೀಮಂತರ ಭ್ರಷ್ಟಾಚಾರದ ಫಲ. ಬೇಸತ್ತ ಜನ ಶ್ರೀಮಂತಪ್ರಭುತ್ವವನ್ನು ಕೊನಡಗಾಣಿಸಿದರು. ಶೋಷಿತವರ್ಗದ ನಾಯಕನ ಕೈಗೆ ಆಧಿಕಾರ ವರ್ಗಾವಣೆಯೊಂದಿತು. ಇಂಥ ಜನ ನಾಯಕನನ್ನು ಟೈರಂಟ್ ಎಂದು ಕರೆಯಲಾಗಿದೆಯಾದರೂ. ಆ ಪದಕ್ಕೆ ಕ್ರೂರಿ, ಪ್ರಜಾಪೀಡಕ ಎಂಬ ಈಗಿನ ಅರ್ಥವನ್ನು ಅನ್ವಯಿಸಲಾಗದು. ವಾಸ್ತವಿಕವಾಗಿ ಈತ ಜನನಾಯಕ; ಜನರ ಹಿತರಕ್ಷಣೆಗಾಗಿ ಶ್ರೀಮಂತರ ದರ್ಪ ಆಡಳಿತದ ವಿರುದ್ಧ ಮಸೆದು ಬಲಪ್ರಯೋಗ ಮಾಡಿ ಅವರನ್ನು ಅಧಿಕಾರದಿಂದ ಹೊರದೂಡಿ ಅಧಿಲಾರದ ಸೂತ್ರಗಳನ್ನು ವಹಿಸಿದ ಈತ ರಾಜ್ಯದ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸುವ ನಿರಂಕುಶ ಪ್ರಭುವಾಗಿದ್ದ. ಆದರೆ ಕ್ರಮೇಣ ಇಂಥ ನಾಯಕರೂ ಅಧಿಕಾರಮದದಿಂದ ತಮ್ಮ ಕರ್ತವ್ಯವನ್ನು ಮರೆತು ಪ್ರಜಾಪೀಡಕರಾದರು. ಇವರೂ ಅದೇ ಕಾರಣದಿಂದ ಅಧಿಕಾರವನ್ನು ಕಳೆದುಕೊಂಡರು. ಕೊನೆಗೆ ಪ್ರಜಾಪ್ರಭುತ್ವ ಅಸ್ತಿತ್ವಕ್ಕೆ ಬಂತು.

	ಸ್ಪಾರ್ಟ: ಲ್ಯಾಕಾನಿಯದ ರಾಜಧಾನಿ ಸ್ಪಾರ್ಟ ನಗರ. ಸುತ್ತಲೂ ಬೆಟ್ಟಗಳಿದ್ದ ಈ ನಗರಕ್ಕೆ ಕೋಟೆಯ ಆವಶ್ಯಕತೆಯೇ ಇರಲಿಲ್ಲ. ಡೋರಿಯನರ ದಾಳಿ ನಡೆದಾಗ ಇಲ್ಲಿದ್ದ ಅಕೀಯನರು ತಮ್ಮ ಸ್ವಾಂತಂತ್ರ್ಯವನ್ನು ಕಳೆದುಕೊಂಡು ದಾಳಿಕಾರರ ಜೀತಗಾರರಾದರು. ಇವರನ್ನು ಹೆಲಾಟರೆಂದು ಕರೆಯಲಾಯಿತು. ಅನಂತರ ಡೋರಿಯನರು ಮೈಸೀನಿಯವನ್ನು ಸಹ ಆಕ್ರಮಿಸಿದರು (ಕ್ರಿ.ಪೂ. 8 ನೆಯ ಶತಮಾನ). ಆದರೆ ವಲಸೆ ಬಂದಿದ್ದ ಈ ಜನರಿಗಿಂತ ಜೀತಗಾರರೇ ಅಧಿಕಸಂಖ್ಯೆಯಲ್ಲಿದ್ದರು. ಆಂತರಿಕ ಅಶಾಂತಿಯ ಪರಿಸ್ಥಿತಿಯ ಲಾಭ ಪಡೆದು ಮೈಸೀನಿಯರು ದಂಗೆ ಎದ್ದರು. ಈ ದಂಗೆಯನ್ನು ಅಡಗಿಸಲಾಯಿತು. ಆದರೆ ಇದು ಸ್ಪಾರ್ಟನರ ಜೀವನದ ದೃಷ್ಟಿ ಕೋನವನ್ನು ಬದಲಾಯಿಸಿತು. ಜೀತಗಾರರನ್ನು ಹದ್ದುಬಸ್ತಿನಲ್ಲಿಡಲು ಲಲಿತಕಲೆಗಳಾಗಲಿ ಕುಶಲಕಲೆಗಳಾಗಲಿ ಸಹಾಯಕವಾಗವು; ಅದಕ್ಕೆ ದೇಹಬಲವಷ್ಟೇ ಅವಶ್ಯಕವೆಂಬುದನ್ನರಿತು ಸ್ಪಾರ್ಟನರ ನಾಯಕನಾದ ಲೈಕರ್ಗಸ್ ಕ್ರಿ.ಪೂ. 600 ರ ಸುಮಾರಿಗೆ ನೂತನÀ ಕಾನೂನೊಂದನ್ನು ಜಾರಿಗೆ ತಂದ.

	ಸ್ಪಾರ್ಟನರ ರಾಜಕೀಯ ಪದ್ಧತಿಯ ಶಿಖರದಲ್ಲಿ ಇಬ್ಬರು ಅರಸರಿದ್ದರು. ಇವರು ಅಧಿಕಾರವನ್ನು ಮುಂದುವರಿಸುತ್ತ ಬಂದರಾದರೂ ಲೈಕಸರ್ಗನ ಸುಧಾರಣೆಗಳ ಪರಿಣಾಮವಾಗಿ ಕ್ರಮೇಣ ತಮ್ಮ ಅಧಿಕಾರವನ್ನು ಯೂಸಫರರಿಗೆ ಬಿಟ್ಟುಕೊಟ್ಟರು. ಜಿರೂಷಿಯ ಎಂಬುದು ಶಿಷ್ಟಸಭೆ. ಇಬ್ಬರು ರಾಜರ ಜೊತೆಗೆ 28 ಮಂದಿ ಹಿರಿಯರು ಇದರ ಸದಸ್ಯರಾಗಿದ್ದರು. ಅಪೆಲ ಎಂಬ ಪೌರಸಭೆಯ ಅನುಮತಿಗೆ ಕಳುಹಬೇಕಾದ ಎಲ್ಲ ವಿಷಯಗಳನ್ನೂ ಇವರು ಮೊದಲು ಪರಿಶೀಲಿಸುತ್ತಿದ್ದರು. ಜಿರೂಷಿಯದ ಸದಸ್ಯರಿಗೆ 60 ವರ್ಷ ವಯಸ್ಸಾಗಬೇಕಿತ್ತು. ಇವರು ಚುನಾಯಿತ ಸದಸ್ಯರು. ಈ ಶಿಷ್ಟ ಸಭೆ ಉಚ್ಚ ನ್ಯಾಯಾಲಯವೂ ಆಗಿತ್ತು. ಅಪೆಲ ಸಾಮಾನ್ಯ ಸದಸ್ಯರ ಸಭೆ. ಇದಕ್ಕೆ ಸದಸ್ಯರಾಗುವ ಎಲ್ಲ ಪೌರರು ಕನಿಷ್ಠ 30 ವರ್ಷ ವಯಸ್ಸಿನವರು. ಜಿರೂಷಿಯದ ಪರಿಶೀಲನೆಗೆ ಬಂದ ವಿಷಯಗಳನ್ನು ಅನುಮೋದಿಸುವ ಅಥವಾ ತಿರಸ್ಕರಿಸುವ ಹಕ್ಕು ಈ ಸಭೆಗೆ ಇತ್ತು. ನ್ಯಾಯಾಧಿಕಾರಿಗಳನ್ನು ನೇಮಿಸುವ, ಅರಸನ ಉತ್ತರಾಧಿಕಾರಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಅಂತಿಮ ಒಪ್ಪಿಗೆ ನೀಡುವ ಅಧಿಕಾರ ಈ ಸಭೆಗೆ ಇತ್ತಾದರೂ ಯಾವ ವಿಷಯವನ್ನು ಮಂಡಿಸುವ ಅಧಿಕಾರ ಇದಕ್ಕಿರಲಿಲ್ಲ. ಯೂಫರೇಟ್ ಎಂಬ ಸಂಸ್ಥೆಯಲ್ಲಿ ಐದು ಜನ ಸರ್ವಾಧಿಕಾರಿಗಳಿದ್ದರು. ಅರಸರ ಅಧಿಕಾರಗಳನ್ನು ಕ್ರಮೇಣ ಇವರು ತಮ್ಮದನ್ನಾಗಿ ಮಾಡಿಕೊಂಡರು. 

	ಎಲ್ಲಕ್ಕಿಂತ ಮುಖ್ಯವಾದ ಸ್ಪಾರ್ಟ ಜನರಲ್ಲಿ ಮೂಡಿಬಂದ ಸೈನಿಕ ಶಿಸ್ತು. ಪ್ರಜೆಗಳು ರಾಜ್ಯದ ಕಾನೂನನ್ನು ಸರ್ವವಿಧದಲ್ಲೂ ಗೌರವಿಸಬೇಕಾಗಿತ್ತು. ಸ್ಪಾರ್ಟದ ಪ್ರಜೆಗಳು ಸರ್ಕಾರದ ಸೊತ್ತು. ಅವರ ಜೀವನವನ್ನು ರೂಪಿಸುತ್ತಿದ್ದುದ್ದು ಸರ್ಕಾರ. ಮಗು ಹುಟ್ಟಿದ ಕೂಡಲೇ ಟೆಗೇಟಸ್ ಗುಡ್ಡದ ಮೇಲಿನ ಬಯಲಿನಲ್ಲಿ ಮೂರು ದಿನಗಳನ್ನು ಕಳೆಯಬೇಕಿತ್ತು. ಆಮೇಲೂ ಬದುಕಿನಲ್ಲಿ ಅದನ್ನು ರಾಷ್ಟ್ರದ ಪ್ರಜೆ ಎಂದು ಸ್ವೀಕರಿಸಿ, ಸರ್ಕಾರದಿಂದÀ ನಿಯಮಿತರಾದ ದಾದಿಗಳು ಪೋಷಿಸುತ್ತಿದ್ದರು. ಅನಂತರ ಏಳನೆಯ ವರ್ಷದಿಂದ 13 ನೆಯ ವರ್ಷಗಳ ಕಾಲ ಅದಕ್ಕೆ ದೈಹಿಕ ಶಿಕ್ಷಣ ಕೊಡಲಾಗುತ್ತಿತ್ತು. ಕಟ್ಟುನಿಟ್ಟಾದ ನಿಯಮಗಳನ್ನು ಶಿಸ್ತಿನಿಂದ ಪಾಲಿಸುವುದು ಮಕ್ಕಳು ಕಲಿಯಬೇಕಾಗಿದ್ದ ಮೊದಲ ಪಾಠ. ಮಾನಸಿಕ ಶಿಕ್ಷಣ ಮಹತ್ವದ್ದಾಗಿರಲಿಲ್ಲ. ಇವರ ಜೀವನ ದೇಶದ ರಕ್ಷಣೆಗೆ ಮುಡಿಪಾಗಿತ್ತು. ಇವರ ಜೀವವೋಪಾಯಕ್ಕೆ ಸರ್ಕಾ ಭೂಮಿಯನ್ನು ಕೊಡುತ್ತಿತ್ತು. ಹೆಲಿಟರು ಅದನ್ನು ಸಾಗುವಳಿ ಮಾಡಿ ಧಾನ್ಯವನ್ನು ಒಡೆಯನಿಗೆ ಸಲ್ಲಿಸುತ್ತಿದ್ದರು. ಯೋಗ್ಯರಾದ ಬಲಿಷ್ಠ, ಆರೋಗ್ಯವಂತ ಮಕ್ಕಳನ್ನು ರಾಷ್ಟ್ರಕ್ಕೆ ಒದಗಿಸುವುದು ಮದುವೆಯ ಗುರಿ. ಮಹಿಳೆಯರು ದೃಡಕಾಯರಾಗಿದ್ದು ಉತ್ಸಾಹಕರವಾದ ಪೀಳಿಗೆಯನ್ನು ಪಡೆಯುವ ಹೊಣೆ ಹೊತ್ತಿದ್ದರು. ಪ್ರಜೆಗಳಲ್ಲಿ ದುರಾಶೆಗೆ ಅವಕಾಶವಿಲ್ಲದಿರಲು ಚಿನ್ನ, ಬೆಳ್ಳಿ ಮುಂತಾದ ಅಮೂಲ್ಯ ಲೋಹಗಳ ನಾಣ್ಯಗಳನ್ನು ಬಳಸದೆ ಕಬ್ಬಿಣದ ತುಂಡುಗಳನ್ನು ವಿನಿಮಯಕ್ಕಾಗಿ ಬಳಸಲಾಗುತ್ತಿತ್ತು. ಇಡೀ ರಾಷ್ಟ್ರವೇ ಒಂದು ಸೈನಿಕ ಶಿಕ್ಷಣ ಶಾಲೆಯಾಗಿ ಮಾರ್ಪಟ್ಟಿತ್ತು.

	ಆಥೆನ್ಸ್: ಗ್ರೀಕ್ ನಗರ ರಾಜ್ಯಗಳಲ್ಲಿ ಆಥೆನ್ಸ್ ಪ್ರಸಿದ್ಧವಾದ್ದು. ಗೀಕ್ ಸಂಸ್ಕøತಿಯ ಕೇಂದ್ರನಗರವಿದು. ಕ್ರಿ.ಪೂ. ಸು. 700ರ ವೇಳೆಗೆ ಆಟಿಕ ಪ್ರದೇಶದ ಹಲವಾರು ನಗರಗಳು ಆಥೆನ್ಸ್ ರಾಜ್ಯದ ಭಾಗಗಳಾಗಿದ್ದುವು. ಹಳೆಯ ಕುಟುಂಬಗಳು, ಶ್ರೀಮಂತ ರೈತವರ್ಗಗಳು ಆಧಿಕಾರದ ತಕ್ಕಡಿ ಹಿಡಿದಿದ್ದುವು. ಡೋರಿಯನರ ದಾಳಿಯ ಸಮಯದಲ್ಲಿ ಕೊಡ್ರಸ್ ಎಂಬ ಅರಸ ಆಳುತ್ತಿದ್ದನಾದರೂ ಅವನ ಅನಂತರ ಕ್ರಿ.ಪೂ 752ರ ಆರ್ಕನ್ ಎಂಬ ನಾಯಕನ ಕೈಗೆ ಶ್ರೀಮಂತರು ಅಧಿಕಾರವಾಗಿತ್ತು. ಅನಂತರ ಅದು 10 ವರ್ಷಗಳಿಗೆ ಸೀಮಿತಗೊಂಡಿತು (ಕ್ರಿ.ಪೂ.683). ಈಗ ಇವನೊಂದಿಗೆ ಇನ್ನೂ ಎಂಟುಜನ-- ಒಬ್ಬ ಬೆಸಿಲಿಯನ್ (ರಾಜ, ಧರ್ಮಾಧಿಕಾರಿ), ಸೇನಾನಿ (ಪೊಲೆಮಾರ್ಕಸ್) ಮತ್ತು 6 ಜನ ಥೆಸ್ಮೊಥಿಟಿಸ್ ಎಂಬ ಕಾನೂನಿನ ಅಧಿಕಾರಿಗಳು ಇದ್ದರು. ಆಥೆನ್ಸಿನ ಸಂವಿಧಾನದಲ್ಲಿ ರಾಜನೆಂಬ ಹೆಸರು ಉಳಿದರೂ ರಾಜತ್ವ ಉಳಿಯಲಿಲ್ಲ. ಬೂಲಿ ಎಂಬ ಸಭೆ ಆರೆ ಬೆಟ್ಟದ ಬುಡದಲ್ಲಿ ಸಭೆ ಸೇರಿ ಈ ಅಧಿಕಾರವರ್ಗವನ್ನು ಚುನಾಯಿಸುತ್ತಿತ್ತು. ಇದಕ್ಕೆ ಈರಪಗಸ್ ಎಂಬ ಹೆಸರೂ ಇದೆ. ಇದು ಶ್ರೀಮಂತರ ಸಭೆ. ಸಮಾಜದಲ್ಲಿ ಆರ್ಥಿಕ ಸ್ಥಿತಿಗೆ ಅನುಗುಣವಾಗಿ ಶ್ರೀಮಂತರು, ವ್ಯಾಪಾರಿಗಳು ಮತ್ತು ಕಸಬುದಾರರು ಹಾಗೂ ಒಕ್ಕಲಿಗರು ಎಂಬ ಮೂರು ವರ್ಗಗಳಿದ್ದುವು. ವ್ಯವಸಾಯಗಾರರ ಹಿಡುವಳಿಗಳು ಆರಂಭದಲ್ಲಿ ಹಿಂದಾಗಿದ್ದರೂ ಕುಲ ಬೆಳೆದಂತೆಲ್ಲ, ಅವರ ಜನಸಂಖ್ಯೆ ಹೆಚ್ಚಿದಂತೆಲ್ಲ, ಭೂಮಿ ವಿಂಗಡವಾಗಿ ಲಾಭದಾಯಕವಾಗದೆ ಕ್ರಮೇಣ ಈ ತುಂಡು ಭೂಮಿಗಳನ್ನು ಇವರು ಶ್ರೀವಂತರಿಗೆ ವಿಕ್ರಯಿಸಿ ಅವರ ತೊತ್ತುಗಳಾಗಿ ದುಡಿದರು. ಗುಲಾಮವರ್ಗ ಕ್ರಮೇಣ ಬೆಳೆಯಿತು. ಪಟ್ಟಗಳಲ್ಲಿ ಮಧ್ಯಮವರ್ಗದವರು ಸ್ವತಂತ್ರ ಕೂಲಿಗಾರರನ್ನು ಆರ್ಥಿಕ ದುಃಸ್ಥಿತಿಗೀಡುಮಾಡಿ ಗುಲಾಮರ ಸಂಖ್ಯೆ ಹೆಚ್ಚಲು ಕಾರಣರಾದರು. ಸಾಮಾಜಿಕ ಪರಿಸ್ಥಿತಿ ಅಲ್ಲೋಲಕಲ್ಲೋಲವಾಯಿತು. ಕ್ರೇಡೋ ಎಂಬ ಥೆಸ್ಮೊಥಿಟ (ಕ್ರಿ.ಪೂ. 620) ಕಾನೂನುಗಳನ್ನು ಕ್ರೋಡೀಕರಿಸಿ ಬರೆಹಕ್ಕೆ ಇಳಿಸಿ ಆಟಿಕದಲ್ಲಿ ಶಾಂತ ಪರಿಸ್ಥಿತಿಯನ್ನುಂಟುಮಾಡಲು ಯತ್ನಿಸಿದ. ಈತ ರೂಪಿಸಿದ ಕಾನೂನುಗಳಲ್ಲಿ ವಿಧಿಸಲಾದ ದಂಡನೆಗಳು ಅತಿ ಕ್ರೂರವಾಗಿದ್ದುವು. ಆದರೆ ಇದು ಸಾಲಗಾರರಿಗೂ ಗುಲಾಮರಿಗೂ ಇತರ ಶೋಷಿತಜನರಿಗೂ ಗುಲಾಮರಿಗೂ ಇತರ ಶೋಷಿತಜನರಿಗೂ ಯಾವ ವಿಧದ ರಕ್ಷಣೆಯನ್ನೂ ನೀಡಲಿಲ್ಲ.

	ಇಂಥ ಸಂದರ್ಭದಲ್ಲಿ ಕ್ರಿಪೂ. 594ರಲ್ಲಿ ಆರ್ಕನ್ ಮುಖ್ಯವಾಗಿ ಸೋಲಾನ್ ಆರಿಸಲ್ಪಟ್ಟ. ಸಮಾಜದ ವಾತಾವರಣವನ್ನು ತಿಳಿಗೊಳಿಸಲು ಈತನಿಗೆ ಸರ್ವಾಧಿಕಾರವನ್ನೀಯಲಾಯಿತು. ಈತ ಜಾರಿಗೆ ತಂದ ಸುಧಾರಣೆಗಳು ಶ್ರೀವಂತರ ಹಾಗೂ ಬಡವರ ಮಧ್ಯೆ ಶಾಂತಿಯನ್ನು, ಹೊಂದಾವಣೆಯನ್ನು ಏರ್ಪಡಿಸುವ ಯತ್ನವಾಗಿತ್ತು. ವ್ಯವಸಾಯ ಕ್ಷೇತ್ರವನ್ನು ಎಲ್ಲ ಸಾಲಗಳಿಂದ ಮುಕ್ತಗೊಳಿಸಿ ರಾಜಕೀಯ ಕೈದಿಗಳನ್ನು ಬಂಧನದಿಂದ ವಿಮೋಚಿಸಿ, ಡ್ರೇಕೋನ ಕಾನೂನುಗಳನ್ನು ಹಿಂದಕ್ಕೆ ಪಡೆದು, ಹೊಸ ಕಾನೂನುಗಳು ಆರ್ಥಿಕ ಸಾಮಾಜಿಕ ತಾರತಮ್ಯವಿಲ್ಲದೆ ಎಲ್ಲರಿಗೂ ಏಕರೀತಿಯಾಗಿ ಅನ್ವಯಿಸುವಂತೆ ಜನರು ತೆರಿಗೆಗಳನ್ನು ಕೊಡುವ ಪ್ರಜಾಹಕ್ಕುಗಳನ್ನು ಪಡೆಯುವ ಏರ್ಪಾಡನ್ನು ಮಾಡಿದ. ಬೂಲಿ ಸಂಸ್ಥೆಗೆ ಇದ್ದ ಕಾನೂನು ರಚನಾಧಿಕಾರವನ್ನು ತೆಗೆದು 400 ಸದಸ್ಯರ ಹೊಸ ಸಭೆಯೊಂದನ್ನೂ ಹೆಲಿಯ ಎಂಬ ಸಾರ್ವಜನಿಕ ನ್ಯಾಯಾಲಯವನ್ನೂ ಸ್ಥಾಪಿಸಿದ.

	ಸೋಲಾನನ ಸುಧಾರಣೆಗಳು ಪ್ರಜಾಪ್ರಭುತ್ವಕ್ಕೆ ತಳಹದಿ ಹಾಕಿದರೂ ಇದರಿಂದ ಅನೇಕ ಪಂಗಡಗಳುಂಟಾಗಿ ಅವುಗಳ ನಡುವೆ ಕಲಹಗಳೇರ್ಪಟ್ಟುವು, ಪೆಸಿಸ್ಟ್ರೇಟಸಸ್ ಎಂಬ ಗುಡ್ಡಗಾಡಿನ ಪರಾಕ್ರಮಶಾಲಿಯೊಬ್ಬ ನಿರಂಕುಶ ಪ್ರಭುತ್ವವನ್ನು ಸ್ಥಾಪಸಿದ (ಕ್ರಿ.ಪೂ. 556). ಈತ ಉತ್ತಮ ಆಡಳಿತಗಾರ. ಇವನ ಆಡಳಿತದಲ್ಲಿ ರಾಷ್ಟ್ರ ಪ್ರಗತಿ ಸಾಧಿಸಿತು. ಆಥೆನ್ಸ್ ನಗರ ಸುಂದರವಾಯಿತು. ಆಥೆನಾ ದೇವತೆಗೆ ಈತ ಆಲಯವನ್ನು ಕಟ್ಟಿಸಿ, ಪ್ರತಿ ವರ್ಷ ಸಂಗೀತ ನೃತ್ಯ ಸಮಾರಂಭಗಳನ್ನೇರ್ಪಡಿಸಿ, ಸಾಹಿತಿಗಳಿಗೆ ಕವಿಗಳಿಗೆ ಪ್ರೋತ್ಸಾಹವಿತ್ತು ರಾಜ್ಯದಲ್ಲಿ ಶಾಂತಿಯನ್ನು ನೆಲೆಗೊಳಿಸಿದ. ಇವನ ಅನಂತರ ಇವನ ಇಬ್ಬರು ಮಕ್ಕಳು ತಂದೆಯ ನೀತಿಯನ್ನೇ ಅನುಸರಿಸಿದರು. ಆದರೆ ಅನಂತರ ಬಂದವರು ಅಧಿಕಾರಮದದಿಂದ ದರ್ಪಿಷ್ಟರಾದರು. ಕೊನೆಗೆ ಕ್ಲೀಸ್ಥನೀಸ್ ಸ್ಪಾರ್ಟದ ಸೈನ್ಯ ಸಹಾಯ ಪಡೆದು ಆಥೆನ್ಸಿನಲ್ಲಿ ರಾಜಕೀಯ ಕ್ರಾಂತಿಗೆ ದಾರಿ ಮಾಡಿ, ಕೊನೆಗೆ ತಾನೇ ಅಧಿಕಾರ ಸೂತ್ರಗಳನ್ನು ವಹಿಸಿಕೊಂಡ.

	ಈತನೂ ಹಲವಾರು ರಾಜಕೀಯ ಸುಧಾರಣೆಗಳನ್ನು ಆಚರಣೆಗೆ ತಂದ. ಹತ್ತು ಹೊಸ ಕುಲಗಳನ್ನೇರ್ಪಡಿಸಿ ಒಂದೊಂದು ಕುಲದಿಂದ 50 ಜನ ಪ್ರತಿನಿಧಿಗಳಿರುವ 500 ಸದಸ್ಯರ ಹೊಸ ಸಮಾಲೋಚನಾ ಸಭೆಯನ್ನು ಸ್ಥಾಪಿಸಿದ. ಸಮಾಜ ದ್ರೋಹಿಯಾದ ನಾಯಕನನ್ನು ದೇಶಭ್ರಷ್ಟನಾಗಿ ಮಾಡುವ ಹೊಸ ವ್ಯವಸ್ಥೆಯನ್ನು ಏರ್ಪಡಿಸಿದ. ಇದು ಸಾಮಾಜಿಕ ಬಹಿಷ್ಕಾರ ಎನಿಸಿತು. ಇವನ ಹಲವಾರು ಸುಧಾರಣೆಗಳು ಸೋಲಾನ್ ಹಾಕಿದ ತಳಹದಿಯನ್ನು ಬಲಗೊಳಿಸಿದುವು.

	ಪರ್ಷಿಯನರ ದಾಳಿ: ಕ್ರಿ.ಪೂ. 7ನೆಯ ಶತಮಾನದಲ್ಲಿ ಪಶ್ಚಿಮ ಏಷ್ಯದಲ್ಲಿ ನೆಲಸಿದ್ದ ಗ್ರೀಕರು ಲಿಡಿಯ ದೇಶದ ರಾಜನಿಗೆ ಸೋತು ಶರಣಾದರು. ಲಿಡಿಯ, ಮಿಡಿಯ ಮತ್ತು ಪರ್ಷಿಯ----ಇವು ಪಶ್ಚಿಮ ಏಷ್ಯದ ಇರಾನ್ ಪ್ರದೇಶದ ಮೂರು ರಾಜ್ಯಗಳು. ಕ್ರಿ.ಪೂ. 500ರಲ್ಲಿ ಪರ್ಷಿಯದ ರಾಜ ಸೈರಸ್ ಲಿಡಿಯ ಮತ್ತು ಮಿಡಿಯ ರಾಜ್ಯಗಳನ್ನು ಜಯಿಸಿ, ಅಲ್ಲಿ ತನ್ನ ಪ್ರತಿನಿಧಿಗಳಾಗಿ ಸತ್ರಪರನ್ನು ನೇಮಿಸಿದ. ಗ್ರೀಕರು ಪರ್ಷಿಯನರಿಗೆ ಪೊಗದಿಯನ್ನು ಕೊಟ್ಟು ಸೈನಿಕ ಸೇವೆಯನ್ನೂ ಮಾಡಬೇಕಾಗಿತ್ತು. ಕ್ರಿ.ಪೂ.499ರಲ್ಲಿ ಡೇರಿಯಸ್ ರಾಜ್ಯವನ್ನು 20 ಪ್ರಾಂತ್ಯಗಳನ್ನಾಗಿ ವಿಂಗಡಿಸಿ ಸತ್ರಪರನ್ನು ನೇಮಿಸಿದ. ಗ್ರೀಕರನ್ನು ತನ್ನ ಹತೋಟಿಯಲ್ಲಿಟ್ಟುಕೊಂಡ. ಆಗ ಪಶ್ಚಿಮ ಏಷ್ಯದ ಗ್ರೀಕರೆಲ್ಲ ದಂಗೆ ಏಳಲು ಸಿದ್ಧರಾದರು. ಇಷ್ಟರಲ್ಲಿ ನಾಕ್ಸಸ್ ದ್ವೀಪದಲ್ಲಿ ಶ್ರೀಮಂತರಿಗೂ, ಪ್ರಜಾಪ್ರಭುತ್ವ ವಾದಿಗಳಿಗೂ ಅಂತರ್ಯುದ್ಧ ಆರಂಭವಾಯಿತು. ಅಲ್ಲಿಯ ಶ್ರೀಮಂತರು ನಾರ್ಡಿಸ್ ನಗರದ ಸತ್ರಪರಲ್ಲಿ ಮೊರೆಯಿಟ್ಟರು. ಆರ್ಟ್ ಫರ್ನಸ್ ಎಂಬ ಸತ್ರಪಮಿಲೆಟಸ್ ನಗರದಿಂದ ಓಡಿಸಲ್ಪಟ್ಟ ಅರಿಸ್ಟಗೊರಸನೆಂಬ ನಿರಂಕುಶ ಪ್ರಭುನಿನೊಡನೆ ನಾಕ್ಸಸ್ ಮೇಲೆ ದಂಡೆಯಾತ್ರೆ ಹೊರಟ. ಮಧ್ಯಮಾರ್ಗದಲ್ಲಿ ಏನೋ ವೈಮನಸ್ಯದ ಕಾರಣವಾಗಿ ಅರಿಸ್ಟಗೊರಸ್ ಬೇರೆಯಾಗಿ ಪಶ್ಚಿಮ ಏಷ್ಯದ ಎಲ್ಲ ಗ್ರೀಕರನ್ನೂ ಪರ್ಷಿಯನರ ವಿರುದ್ಧ ದಂಗೆ ಏಳಲು ಪ್ರಚೋದಿಸಿದ. ಸ್ಪಾರ್ಟದ ಸಹಾಯ ಕೋರಿ ವಿಫಲವಾದಾಗ ಆಥೆನ್ಸಿನ ಸಹಾಯ ಪಡೆದು ಸಾರ್ಡಿಸ್ ನಗರದ ಮೇಲೆ ದಂಡೆತ್ತಿಹೋಗಿ ಸೋತುಹೋದ. ಐಯೋನಿಯನರ ಹೊಡೆದಾಟ ನಿಷ್ಫಲವಾಗಿ ಅವರ ದಂಗೆ ಕೊನೆಗೊಂಡಿತು. ಡೇರಿಯಸ್ ಸಾರ್ಡಿಸ್ ನಗರವನ್ನು ಸುಟ್ಟು ಕಾಕಿದ. ಗ್ರೀಕರ ಮೇಲೆ ಸೇಡು ತೀರಿಸಿಕೊಳ್ಳಲು ತನ್ನ ಅಳಿಯ ಮಾರ್ಡೋನಿಯಸನ ನಾಯಕತ್ವದಲ್ಲಿ ಸೈನ್ಯವನ್ನು ಗ್ರೀಸಿನ ದಂಡಯಾತ್ರೆಗೆ ಕಳುಹಿಸಿದ. ಆದರೆ ಪ್ರಕೃತಿಯ ವಿರೋಧದಿಂದಾಗಿ ಪರ್ಷಿಯನರಿಗೆ ಅಪಜಯವಾಯಿತು.

	ಡೇರಿಯಸ್ ಮತ್ತೊಂದು ಸೇನೆಯನ್ನು ಸಿದ್ಧಪಡಿಸಿ, ಗ್ರೀಕ್ ಪ್ರದೇಶಗಳಲ್ಲಿ ಭೂಮಿ, ನೀರನ್ನು ನಿರ್ಭಂಧದಿಂದ ಕೇಳಲು ದೂತರನ್ನು ಕಳುಹಿಸಿದ. ಹಾಗೆ ಕೊಟ್ಟರೆ ಅವರು ಪರ್ಷಿಯ ಸರ್ವಭೌಮತ್ವಕ್ಕೆ ಒಪ್ಪಿದಂತಾಗುತ್ತಿದ್ದುದರಿಂದ ಸ್ಪಾರ್ಟ, ಆಥೆನ್ಸ್ ರಾಷ್ಟ್ರಗಳು ಇದನ್ನು ವಿರೋಧಿಸಿದುವು. ಆಗ ಡೇರಿಯಸ್ ಎರಡನೆಯ ದಂಡಯಾತ್ರ ಕೈಗೊಂಡು ಹಿಪ್ಪಿಯಸ್ ಎಂಬ ದೇಶಭ್ರಷ್ಟನ ನೆರವಿನಿಂದ ಎರಿಟ್ರಿಯ ನಗರವನ್ನು ನಾಶ ಮಾಡಿದ. ಪರ್ಷಿಯನರು ಆಥೆನ್ಸಿಗೆ 20 ಮ. ದೂರದ ಮ್ಯಾರಥಾನ್ ಎಂಬಲ್ಲಿ ನೆಲೆಯೂರಿದರು. ಪ್ರಪಂಚದ ಇತಿಹಾಸದಲ್ಲಿ ಮ್ಯಾರಥಾನ್ ಕದನ ಒಂದು ನಿರ್ಧಾರಕ ಕದನವೆಂದು ವರ್ಣಿಸಲಾಗಿದೆ. ಆಥಿನಿಯನರು ಸಮಯ ನೋಡಿ ಪರ್ಷಿಯನರನ್ನು ಮುತ್ತಿದರು. ಪರ್ಷಿಯನರು ಸೋತರೂ ಆಥೆನ್ಸ್ ನಗರಕ್ಕೆ ಶಾಶ್ವತ ವಿಜಯ ದೊರಕಲಿಲ್ಲ. ಡೇರಿಯಸ್ ಇನ್ನೂ ಪ್ರಬಲಸೇನೆಯನ್ನು ಸಿದ್ಧಪಡಿಸಿ ಯುದ್ಧಮಾಡಲು ನಿರ್ಧರಿಸಿದ. ಆದರೆ ಅಷ್ಟರಲ್ಲೆ ಅವನು ತೀರಿಕೊಂಡ. ಅವನ ಮಗ ಗ್ರೀಸ್ ದೇಶದ ಮೇಲೆ ದಂಡೆತ್ತಿ ಬಂದ. ಈ ಸಮಯದಲ್ಲಿ ಆಥೆನ್ಸಿನ ನಾಯಕತ್ವವನ್ನು ತಿಮಿಸ್ಟಾಕ್ಲೀಸನೂ ಸ್ಪಾರ್ಟದ ನಾಯಕತ್ವವನ್ನು ಲಿಯೋನಿಡಾಸನೂ ವಹಿಸಿಕೊಂಡರು. ಕಾರಿಂತ್ ಭೂಶಿರದಲ್ಲಿ ಗ್ರೀಕರ ರಾಷ್ಟ್ರ ಸಭೆಯನ್ನೇರ್ಪಡಿಸಿ ಪರ್ಷಿಯನರ ವಿರುದ್ಧವಾದ ಪಂಗಡವೊಂದನ್ನು ನಿರ್ಮಿಸಿದರು. ಸ್ಪಾರ್ಟದ ಲಿಯೋನಿಡಾಸ್ ತರ್ಮಾಪಿಲೀ ಕಣಿವೆಯ ಬಳಿ ಪರ್ಷಿಯನರನ್ನು ಎದುರಿಸಿದರೂ ದೇಶದ್ರೋಹಿಯೊಬ್ಬನ ಒಳ ಸಂಚಿನಿಂದಾಗಿ ಪರ್ಷಿಯರಿಗೆ ಶರಣಾಗಬೇಕಾಯಿತು.

	ಆಥೆನ್ಸಿಗೆ ಗಂಡಾಂತರ ಒದಗಿತ್ತು. ಡೆಲ್ಫೈ ದಿವ್ಯವಾಣಿಯ ಆದೇಶದಂತೆ ತಿಮಿಸ್ಟಾಕ್ಲೀಸ್ ಎಲ್ಲ ಪೌರರಿಗೂ ನೌಕೆಗಳನ್ನು ಸೇರುವಂತೆ ಹೇಳಿದ. ಆಥೆನ್ಸ್ ಮತ್ತು ಆಟಿಕ ಪ್ರದೇಶಗಳನ್ನು ಬಿಟ್ಟು ಉಳಿದೆಡೆಗಳಲ್ಲಿ ಎಲ್ಲರೂ ನೌಕೆಗಳನ್ನು ಸೇರಿದರು. ಪರ್ಷಿಯನರು ಆಟಿಕ ಪ್ರದೇಶವನ್ನು ದಾಟಿ, ಆಥೆನ್ಸ್ ನಗರವನ್ನು ಮುತ್ತಿ ಅಲ್ಲಿಯ ದೇವಾಲಯಗಳನ್ನೆಲ್ಲ ಸುಟ್ಟುಹಾಕಿದರು. ಕಾರಿಂತ ಭೂಶಿರದ ಸಾಲಾಮಿಸ್ ದ್ವೀಪದಲ್ಲಿದ್ದ ಆಥಿನಿಯನರ ನೌಕೆಗೆ ಪರ್ಷಿಯನರು ಅಡ್ಡನಿಂತಾಗ ತಿಮಿಸ್ಟಾಕ್ಲೀಸ್ ಅವರನ್ನು ಥಟ್ಟನೆ ಮುತ್ತಿದ. ಇಕ್ಕಟ್ಟಿನ ಪ್ರದೇಶವಾದ್ದರಿಂದ ಪರ್ಷಿಯನರು ಪೂರ್ಣ ಸೋತು ಏಷ್ಯ ಪ್ರಾಂತ್ಯಕ್ಕೆ ಮುರಳಿದರು.

	ಪರ್ಷಿಯನರ ದಂಡಯಾತ್ರಗಳನ್ನು ವಿಫಲಗೊಳಿಸಿ ಅಧ್ಭುತ ಜಯಗಳಿಸಿದ ಆಥೆನ್ಸ್ ರಾಷ್ಟ, ಏಷ್ಯದ ಗ್ರೀಕರನ್ನೆಲ್ಲಕ ಸೇರಿಸಿ ಒಂದು ಒಕ್ಕೂಟವನ್ನು ಸ್ಥಾಪಿಸಿತು. ಅನೇಕ ಗ್ರೀಕ್ ರಾಷ್ಟ್ರಗಳು ಈ ಒಕ್ಕೂಟವನ್ನು ಸೇರಿದುವು. ಪಶ್ಚಿಮ ಏಷ್ಯದ ಗ್ರೀಕರಿಗೆ ಸಹಾಯಕವಾಗಿ, ಅಲ್ಲಿಂದ ಪರ್ಷಿಯನರನ್ನು ಓಡಿಸಬೇಕೆಂಬುದೇ ಸಂಘದ ಮುಖ್ಯ ಉದ್ದೇಶವಾಗಿತ್ತು. ಕ್ರೈಮನ್ ಎಂಬ ಶೂರ ಒಕ್ಕೂಟದ ಸೇನಾಪತಿಯಾಗಿದ್ದ. ಈ ಸಂಘ ಆಥೆನ್ಸ್ ಸಾಮ್ರಾಜ್ಯವಾಗಿ ಬದಲಾಯಿತು.

	ಪೆರಿಕ್ಲೀಸನ ಯುಗ: ಕ್ರಿ ಪೂ.467--429. ಈ ಕಾಲದಲ್ಲಿ ಗ್ರೀಕ್ ನಾಗರಿಕತೆ ಅತ್ಯುನ್ನತ ಮಟ್ಟಕ್ಕೇರಿತು. ಪೆರಿಕ್ಲೀಸ್ ಆರ್ಕನ್ ಆದ ಮೇಲೆ ಆಥೆನ್ಸ್ ಸಾಹಿತ್ಯ, ಕಲೆ, ತತ್ತ್ವಜ್ಞಾನ ಮುಂತಾದವುಗಳಲ್ಲಿ ಪರಿಪೂರ್ಣತೆ ಪಡೆಯಿತು. ಆದ್ದರಿಂದ ಇವನ ಕಾಲವನ್ನು ಸುವರ್ಣಯುಗವೆಂದು ಕರೆಯುವರು. ಪರೀಕ್ಲೀಸ್ ಉಚ್ಚ ಕುಲದಲ್ಲಿ ಹುಟ್ಟಿ ಉತ್ತಮ ಶಿಕ್ಷಣ ಪಡೆದಿದ್ದ. ರಾಜಕಾರಣಿಗಳಿಗಿರಬೇಕಾದ ಗುಣಗಳೆಲ್ಲ ಇವನಲ್ಲಿದ್ದುವು. 30 ವರ್ಷಗಳಿಗೂ ಹೆಚ್ಚು ಕಾಲ ಸಾರ್ವಜನಿಕ ಕ್ಷೇತ್ರದಲ್ಲಿ ಮುಂದಾಳಾಗಿದ್ದ. ಇವನ ರಾಜಕೀಯ ಸುಧಾರಣೆಗಳು ಸೋಲಾನನ ಕಾರ್ಯವನ್ನು ಪೂರ್ಣಗೊಳಿಸಿದುವು. ಇಸ್ಕೈಲಸ್, ಯುರಿಪಿಡೀಸ್, ಸಾಪೋಕ್ಲೀಸ್ ಇವರು ದುರಂತ ನಾಟಕಗಳನ್ನು ರಚಿಸಿದರು. ಇದರಿಂದ ಜನರ ವಿಚಾರಶಕ್ತಿ ಬೆಳೆದು ಕಲಾಭಿರುಚಿ ಬೆಳೆಯಿತು. ಹರ್ಷನಾಟಕಗಳೂ ಬಂದುವು. ಆರಿಷ್ಟಾಫನೀಸ್ ಇಂಥ ನಾಟಕಗಳನ್ನು ಬರೆದಿದ್ದಾನೆ. ಸುಪ್ರಸಿದ್ಧ ಇತಿಹಾಸಕಾರರಾದ ಹೀರಾಡೊಟಸ ಮತ್ತು ತುಸಿಡಿಡೀಸ್ ಆತೆನ್ಸಿನವರು. ಸಾಕ್ರಟೀಸ್ ಪ್ಲೇಟೊ ಮತ್ತು ಆರಿಸ್ಟಾಟಲ್ ಎಂಬ ಸುಪ್ರಸಿದ್ಧ ಮೇಧಾವಿಗಳು ಇದೇ ಯುಗದವರು. ವಾಸ್ತುಶಿಲ್ಪ. ಚಿತ್ರಶಿಲ್ಪ, ಮೂರ್ತಿಶಿಲ್ಪ, ಸಂಗೀತ ಗ್ರೀಕರ ಜೀವಾಳಗಳಾಗಿದ್ದುವು. ಸತ್ಯ. ಸೌಂದರ್ಯ, ಸೌಜನೈ ಇವು ಮೂರೂ ಮುನಿಷ್ಯನ ಎಲ್ಲ ಕೃತಿಗಳಲ್ಲೂ ಸಮರಸವಾಗಿ ಕೂಡಿರಬೇಕೆಂದು ಗ್ರೀಕರು ನಂಬಿದ್ದರು. ಅಕ್ರಾಪೊಲಿಸ್ ಎಂಬಲ್ಲಿ ಪಾರ್ತಿನಾನ್ ಮತ್ತು ಇತರ ದೇವಮಂದಿರಗಳಲ್ಲಿ ಫಿಡಿಯಾಸ್ ಎಂಬ ಶಿಲ್ಪ ತನ್ನ ಕಲಾಪ್ರೌಢಿಮೆಯನ್ನು ತೋರಿಸಿದ್ದಾನೆ. ಹೀಗೆ ಈ ಕಾಲದಲ್ಲಿ ಆಥೆನ್ಸಿನ ಜನತೆ ತನ್ನ ಅಮೋಘವಾದ ಸಂಸ್ಕøತಿ ಕಾಣಿಕೆಯನ್ನು ಜನತೆಗೆ ಅರ್ಪಿಸಿತು.

	ಆದರೆ ರಾಜಕೀಯ ವಿಷಯಗಳಲ್ಲಿ ಮಾತ್ರ ಆಥೆನ್ಸ್ ಅನುಸರಿಸಿದ ನೀತಿ ಪ್ರಗತಿ ವಿರೋಧವಾಗಿತ್ತು. ತನ್ನ ಮಿತ್ರರಾಷ್ಟ್ರಗಳನ್ನೆಲ್ಲ ಉಪಾಯದಿಂದಲೊ ಬಲ ಪ್ರಯೋಗದಿಂದಲೋ ತನ್ನ ಅಧೀನಕ್ಕೊಳಪಡಿಸಿಕೊಂಡು ಒಂದು ಸಾಮ್ರಾಜ್ಯವನ್ನೇ ಕಟ್ಟಿಕೊಂಡಿತು. ಪರಿಕ್ಲೀಸ್ ಕ್ರಿ.ಪೂ. 446ರಲ್ಲಿ ಸ್ಪಾರ್ಟ ರಾಷ್ಟ್ರದೊಡನೆ 30 ವರ್ಷಗಳ ಕೌಲನ್ನು ಮಾಡಿಕೊಂಡ.

	ಪೆರಿಕ್ಲೀಸನ ಅನಂತರ ಎಲ್ಲೆಡೆಯಲ್ಲೂ ಆಥನ್ಸ್ ರಾಷ್ಟ್ರವಿರೋಧಿ ದಂಗೆಗಳು ಏಳದತೊಡಗಿದವು. ಕೊನೆಗೆ ಆಥೆನ್ಸ್ ರಾಷ್ಟ್ರದ ಗೌರವಕ್ಕೆ ಚ್ಯುತಿಯುಂಟಾಯಿತು. ಪೆಲೊಪಾನೀಷಿಯನ್ ಯುದ್ಧದಲ್ಲಿ ಆಥೆನ್ಸ್ ರಾಷ್ಟ್ರ ತನ್ನ ನಾಯಕತ್ವವನ್ನು ಕಳೆದುಕೊಂಡಿತು. ಎಲ್ಲ ಗ್ರೀಕ್ ರಾಷ್ಟ್ರಗಳೂ ಅತ್ಯಂತ ಉತ್ಸಾಹದಿಂದ ಆಥೆನ್ಸನ್ನು ನಾಶ ಮಾಡಲು ಸಿದ್ಧವಾದುವು. ತೀಬನರು ಪ್ಲಾಟೇ ನಗರವನ್ನು ನಾಶ ಮಾಡಲು ಹೊರಟಾಗ, ಆಥೆನ್ಸ್ ರಾಷ್ಟ್ರ ತೀಬನರಿಗೇ ಸಹಾಯಮಾಡಿ 30 ವರ್ಷಗಳ ಕೌಲಿನ ಉಲ್ಲಂಘನೆ ಮಾಡಿತು. ನಿಷಿಯಸ್ ಎಂಬ ಆತಿಥಿಯನ್ ನಾಯಕ 415ರಲ್ಲಿ ಸೈರಾಕ್ಯೂಸ್ ಮೇಲೆ ದಂಡೆತ್ತಿಹೋಗಿ ಸೆರೆಯಾದ. ಸ್ಪಾರ್ಟವೂ ಪರ್ಷಿಯನರ ಸಹಾಯದಿಂದ ಎಗಾಸ್ ಪೊಟಮಿ ಎಂಬಲ್ಲಿ ಲೈನಾಂಡರ ನಾಯಕತ್ವದಲ್ಲಿ ಅಥಿನಿಯನರನ್ನು ಸಂಪೂರ್ಣ ಸೋಲಿಸಿತು. ಆಥೆನ್ಸಿನ ನಾಶದಿಂದ ಸ್ವಾತಂತ್ರ್ಯ ಲಭಿಸಿತೆಂದು ಗ್ರೀಕ್ ರಾಷ್ಟ್ರಗಳು ಸಂತೋಷಪಡುವಷ್ಟರಲ್ಲಿ ಅವರ ಮೇಲೆ ಸ್ಪಾರ್ಟದ ದಬ್ಬಾಳಿಕೆ ಆರಂಭವಾಯಿತು. ನಿರಂಕುಶ ಪ್ರಭುತ್ವ ಆರಂಭವಾಯಿತು. 

	ಕ್ರಿ.ಪೂ. 404ರಲ್ಲಿ ಡೇರಿಯಸನ ಮಗ ಸೈರಸ್ ತನ್ನ ಅಣ್ಣ ಆರ್ಟಖ್ಸರ್ಸಸ್‍ನನ್ನು ಓಡಿಸಿ ತಾನು ರಾಜನಾಗಬೇಕೆಂದು ಸ್ಪಾರ್ಟದ ಸಹಾಯ ತೆಗೆದುಕೊಂಡ. ಆದರೆ ಸೈರಸ್ ಅವನಿಂದ ಕೊಲ್ಲಲ್ಪಟ್ಟ. ಇದರಿಂದಾಗಿ ಪರ್ಷಿಯ ಸ್ಪಾರ್ಟದ ಮೇಲೆ ಯುದ್ಧ ಹೂಡಿತು. ಗ್ರೀಕರು ಪರ್ಷಿಯದ ಸಾರ್ವಭೌಮತ್ತ್ವವನ್ನೆ ಅಂಗೀಕರಿಸಿ ಸ್ಪಾರ್ಟದ ಸೇನೆಯನ್ನು ಓಡಿಸಿದರು. ಎಲ್ಲ ಕಡೆಯಲ್ಲೂ ತೊಂದರೆಗಳುಂಟಾಗಲು ಸ್ಪಾರ್ಟ ಪರ್ಷಿಯದ ಆರ್ಟಖ್ಸರ್ಸಸ್‍ನೊಂದಿಗೆ ಕೌಲನ್ನು ಮಾಡಿಕೊಂಡು ಅದರ ದುರುಪಯೋಗಪಡಿಸಿಕೊಂಡು ಪುನಃ ದಬ್ಬಾಳಿಕೆಯನ್ನಾರಂಭಿಸಿತು. ಉತ್ತರ ಗ್ರೀಸಿನಲ್ಲಿ ಒಲಿಂಪಸ್ ಮತ್ತು ಇತರ ರಾಷ್ಟ್ರಗಳು ಸ್ಪಾರ್ಟದ ವಿರುದ್ಧ ಒಕ್ಕೂಟ ಸ್ಥಾಪಿಸಿದುವು. ಆದರೆ ತೀಬ್ಸಿನ ಸಹಾಯದಂದ ಸ್ಪಾರ್ಟ ಈ ಒಕ್ಕೂಟವನ್ನು ನಾಶಪಡಿಸಿತು. ತೀಬ್ಸಿನಲ್ಲೂ ಸ್ಪಾರ್ಟನರ ಹಿಂಸಾತ್ಮಕ ಆಡಳಿತ ಆರಂಭವಾಗಲು ಅಲ್ಲಿಯ ರಾಷ್ಟ್ರನಾಯಕರಾದ ಪಿಲಾಪಿಡಾಸ್ ಮತ್ತಿತರ 6 ಜನ ಒಳಸಂಚು ನಡೆಸಿ ಕ್ರಾಂತಿ ಏರ್ಪಡಿಸಿ, ಸ್ಪಾರ್ಟದ ನಾಯಕನನ್ನು ಕೊಂದುಹಾಕಿ, ತೀಬ್ಸಿನಲ್ಲಿ ಪ್ರಜಾಪ್ರಭುತ್ವವನ್ನು ಸ್ಥಾಪಿಸಿದರು. 

	ಕ್ರಿ.ಪೂ. 377ರಲ್ಲಿ ಆಥೆನ್ಸ್ ಮತ್ತಿತರ ರಾಷ್ಟ್ರಗಳು ಒಕ್ಕೂಟಮೊಂದನ್ನು ಸ್ಥಾಪಿಸಿಕೊಂಡು ನಾಕ್ಸಸ್ ಮತ್ತು ಕಾರ್ಸಿರ ಕದನಗಳಲ್ಲಿ ಸ್ಪಾರ್ಟದ ನೌಕಾಶಕ್ತಿಯನ್ನು ಪೂರ್ಣ ನಾಶಮಾಡಿದುವು. ಅನಂತರ ಸ್ಟಾರ್ಟ ಆಥೆನ್ಸಿನೊಡನೆ ಕಾಲಿಯಸ್ ಕೌಲು (ಕ್ರಿ.ಪೂ. 371) ಮಾಡಿಕೊಂಡು, ಎಲ್ಲ ನಗರಗಳೂ ಸ್ವತಂತ್ರವಾಗಿರಬೇಕೆಂದು ಒಪ್ಪಿತು. ಆದರೆ ಭಿನ್ನಾಭಿಪ್ರಾಯ ಹುಟ್ಟಿತು. ಲ್ಯೂಕ್ಟ್ರ ಕದನದಲ್ಲಿ ತೀಬ್ಸ್ ಸ್ಟಾರ್ಟವನ್ನು ಸೋಲಿಸಿ ತನ್ನ ಸಾರ್ವಭೌಮತ್ವವನ್ನು ಸ್ಥಾಪಿಸಿತು. ತೀಬ್ಸ್ ರಾಷ್ಟ್ರದ ಕೀರ್ತಿಗೆ ಪಿಲಾಪಿಡಾಸ್ ಮತ್ತು ಇಪಾಮಿನಾಂಡಸ್ ಎಂಬಿಬ್ಬರು ರಾಷ್ಟ್ರಪ್ರೇಮಿಗಳು ಕಾರಣ. ಉತ್ತರ ಗ್ರೀಸಿನಲ್ಲಿ ಪಿಲಾಪಿಡಾಸನೂ ದಕ್ಷಿಣದಲ್ಲಿ ಇಪಾಮಿನಾಂಡಸನೂ ತಮ್ಮ ಪ್ರಭುತ್ವ ಸ್ಥಾಪಿಸಲು ಆಕ್ರಮಣವನ್ನಾರಂಭಿಸಿದರು. ಕ್ರಿ.ಪೂ. 364ರಲ್ಲಿ ತೆಸಲಿಯ ಅಲೆಗ್ಸಾಂಡರನ ಜೊತೆ ಯುದ್ಧ ಮಾಡಿದಾಗ ಪಿಲಾಪಿಡಾಸ್ ಸತ್ತ. ಆದರೂ ತೀಬನರು ಅಲೆಗ್ಸಾಂಡರನನ್ನು ಸೋಲಿಸಿದರು. ಇಪಾಮಿನಾಂಡಸ್ ದಕ್ಷಿಣದಲ್ಲಿ ಆಗಾಗ್ಗೆ ಆಕ್ರಮಣ ನಡೆಸಿ ಇತರ ರಾಷ್ಟ್ರಗಳ ವಿರೋಧಕ್ಕೆ ಗುರಿಯಾದ. ಕ್ರಿ.ಪೂ. 362ರಲ್ಲಿ ದಕ್ಷಿಣ ಗೀಸಿನ ಮೇಲೆ ನಾಲ್ಕನೆಯ ಸಾರಿ ದಂಡಯಾತ್ರೆ ನಡೆಸಿದಾಗ, ಮಾಂಡನಿಯ ಕದನದಲ್ಲಿ ಇಪಾಯಿನಾಂಡಸ್ ಮರಣ ಹೊಂದಿದ. ತೀಬ್ಸ್ ರಾಷ್ಟ್ರ ಮುಕ್ತಾಯವಾಯಿತು. 

	ಮ್ಯಾಸಿಡಾನ್ ದಂಡಯಾತ್ರೆ : ಗ್ರೀಸಿನ ಒಳಜಗಳ ಮ್ಯಾಸಿಡೋನಿಯದ ಪ್ರಾಬಲ್ಯಕ್ಕೆ ಕಾರಣವಾಯಿತು. ಮ್ಯಾಸಿಡೋನಿಯ ಗ್ರೀಸಿನ ಉತ್ತರಕ್ಕಿದೆ. ಅಲ್ಲಿಯ ಜನ ಗ್ರೀಕ್ ಬುಡಕಟ್ಟಿನವರೇ. ಇವರು ಅನಾಗರಿಕರಾಗಿಯೇ ಉಳಿದಿದ್ದರು. ರಾಜನೀತಿನಿಪುಣನಾದ ಫಿಲಪ್ ಎಂಬವನು ಸೈನ್ಯ ಸುಧಾರಣೆ ಮಾಡಿ, ಉತ್ತರ ಗ್ರೀಸಿನ ಅನೇಕ ಪ್ರದೇಶಗಳನ್ನು ಜಯಿಸಿ ಮ್ಯಾಸಿಡೋನಿಯವನ್ನು ವಿಸ್ತರಿಸಿದ. ಅವನಿಗೆ ಆಥೆನ್ಸ್ ರಾಷ್ಟ್ರದ ಮೇಲೆ ವಿಶೇಷವಾದ ಗೌರವವಿತ್ತು. ತನ್ನ ಮಗ ಅಲೆಗ್ಸಾಂಡರನಿಗೆ ಆರಿಸ್ಟಾಟಲನನ್ನು ಗುರುವಾಗಿ ನೇಮಿಸಿದ. ಕ್ರಿ.ಪೂ. 338 ರಲ್ಲಿ ಡೆಮಾಸ್ತನೀಸ್ ಫಿಲಪನ ವಿರುದ್ಧ ಯುದ್ಧಕ್ಕೆ ಪ್ರಚೋದಿಸಿದ. ಖರೋನಿಯ ಕದನದಲ್ಲಿ ಫಿಲಿಪ್ ಆಥನ್ಸ್ ವಿರುದ್ಧ ಹೋರಾಡಿ ಪೂರ್ಣ ಜಯಶಾಲಿಯಾದ. ಈ ಕದನದಿಂದ ಗ್ರೀಕರು ತಮ್ಮ ಸ್ವಾತಂತ್ರ್ಯವನ್ನು ಸಂಪೂರ್ಣ ಕಳೆದುಕೊಂಡರು. ಫಿಲಿಪ್ ತನ್ನ ಒಳ್ಳೆಯ ಗುಣಗಳಿಂದ ಗ್ರೀಕರನ್ನು ಆಕರ್ಷಿಸಿ, ಕ್ರಿ.ಪೂ. 337ರಲ್ಲಿ ಎಲ್ಲ ಗ್ರೀಸ್ ರಾಷ್ಟ್ರಗಳನ್ನೂ ಸೇರಿಸಿ ಕಾರಿಂತ್ ರಾಷ್ಟ್ರಸಭೆ ನೆಡೆಸಿದ. ಎಲ್ಲ ರಾಷ್ಟ್ರಗಳೂ ಉತ್ಸಾಹದಿಂದ ಸೈನ್ಯ ಕಳುಹಿಸುವುದಾಗಿ ಒಪ್ಪಿದುವು. ಪೂರ್ವದಿಕ್ಕಿನ ದಂಡಯಾತ್ರೆ ಕೈಗೊಳ್ಳುವ ಸಮಯಕ್ಕೆ ಕಾರಣಾಂತರದಿಂದ ಫಿಲಿಪ್ ವಿವಾಹ ವಿಚ್ಛೇದನ ಮಾಡಿಕೊಂಡ. ಆತನ ಪತ್ನಿ ತನ್ನ ಮಗ ಅಲೆಗ್ಸಾಂಡರ್ ಮುಂದೆ ರಾಜನಾಗಬೇಕೆಂದು ಕ್ರಿ.ಪೂ. 336ರಲ್ಲಿ ಗಂಡನನ್ನು ಮೋಸದಿಂದ ಕೊಲ್ಲಿಸಿದಳು. 

	ಅಲೆಗ್ಸಾಂಡರ್ ಮಹಾಶಯ : ಕ್ರಿ. ಪೂ. 336-ಕ್ರಿ.ಪೂ. 323. ಫಿಲಿಪನ ಮರಣಾನಂತರ ಎಲ್ಲೆಡೆಯಲ್ಲೂ ದಂಗೆ ಏಳಲು ಆರಂಭವಾಯಿತು. ಅಲೆಗ್ಸಾಂಡರ್ ಸಿಂಹಾಸನಕ್ಕೆ ಬಂದು, ದಂಗೆಯನ್ನು ಅಡಗಿಸಿ, ಶತ್ರುಗಳನ್ನು ನಾಶಮಾಡಿದ. ತಾರುಣ್ಯದಲ್ಲೇ ಉಚ್ಚಶಿಕ್ಷಣವನ್ನು ಪಡೆದಿದ್ದ ಈತನಿಗೆ ಗ್ರೀಕರ ಕಲೆ ಸಾಹಿತ್ಯಗಳಲ್ಲಿ ಅಭಿರುಚಿಯಿತ್ತು. ಗ್ರೀಕರು ಅಲೆಗ್ಸಾಂಡರನನ್ನೇ ತಮ್ಮ ನಾಯಕನೆಂದು ಒಪ್ಪಿದರು. ಗ್ರೀಸ್ ಅವನ ಹತೋಟಿಯಲ್ಲಿತ್ತು. ಆತ ದೇಶದಲ್ಲಿ ಭದ್ರತೆ ಸ್ಥಾಪಿಸಿ ಏಷ್ಯದ ಮೇಲೆ ದಂಡಯಾತ್ರೆಗೆ ಸಿದ್ಧನಾದ. ಎಲ್ಲೆಡೆಯೂ ಗ್ರೀಕ್ ನಾಗರಿಕತೆಯನ್ನು ಸ್ಥಾಪಿಸಬೇಕೆಂಬುದೇ ಅವನ ಉದ್ದೇಶವಾಗಿತ್ತು. ದಂಡಯಾತ್ರೆ ಹೊರಟು ಗ್ರೀಸಿನಿಂದ ಪಂಜಾಬಿನವರೆಗೆ ಸಾಮ್ರಾಜ್ಯ ವಿಸ್ತರಿಸಿದ. ಗ್ರೀಕ್ ನಾಗರಿಕತೆ ಇಲ್ಲೆಲ್ಲ ಹಬ್ಬಿತು. ದಂಡಯಾತ್ರೆಯಿಂದ ಹಿಂದಿರುಗುತ್ತಿದ್ದಾಗ ಅಲೆಗ್ಸಾಂಡರ್ ತೀರಿಕೊಂಡ. ಅವನ ಮರಣದೊಂದಿಗೆ ಪ್ರಾಚೀನ ಗ್ರೀಸಿನ ವೈಭವದ ಇತಿಹಾಸ ಕೊನೆಗೊಂಡಿತು.				(ಆರ್.ಪಿ.)

	ಅಲೆಗ್ಸಾಂಡರನ ದಾಳಿ ಗ್ರೀಸ್ ದೇಶದ ಸ್ವಾತಂತ್ರ್ಯಕ್ಕೆ ಧಕ್ಕೆ ತಂದಿತಾದರೂ ಸಾಂಸ್ಕøತಿಕವಾಗಿ ಇದರ ಪರಿಣಾಮ ಅಪಾರವಾದುದು. ತನ್ನ ಸುತ್ತಲಿನ ದ್ವೀಪಗಳಿಗಷ್ಟೇ ಸೀಮಿತವಾಗಿದ್ದ ಗ್ರೀಕ್ ಸಂಸ್ಕøತಿ ಇತರೆಡೆಗೂ ವ್ಯಪಾಪಿಸಿತು. ಪರ್ಷಿಯ, ಈಜಿಪ್ಟ್, ಬ್ಯಾಬಿಲೋನಿಯ ಸಂಸ್ಕøತಿಗಳ ಪರಿಚಯ, ಪರಸ್ಪರ ಪ್ರಭಾವ ಗಾಢವಾದುವು. ಇದನ್ನು ಹೆಲೆನಿಸ್ಟಿಕ್ ಸಂಸ್ಕøತಿ, ಸಿದ್ಧಾಂತ, ಕಲೆಗಳನ್ನು ಕುರಿತು ಬಹಳ ಗೌರವವಿತ್ತು. ಈ ಸಂಸ್ಕøತಿ ಪೌರಸ್ತ್ಯ ದೇಶಗಳಲ್ಲೂ ಹರಡಬೇಕೆಂಬ ಅವನ ಆಸೆ ಈಡೇರಿತು. ಅವನು ಕಟ್ಟಿದ ಸಾಮ್ರಾಜ್ಯ ಕುಸಿದರೂ ಅವನು ಕಂಡ ಕನಸು ನನಸಾಯಿತು. ಅವನ ದಂಡನಾಯಕರು ಒಬ್ಬೊಬ್ಬರೂ ಸತ್ತ್ವ ಶಾಲಿಗಳಾಗಿದ್ದ ಕಾರಣ ಸಾಮ್ರಾಜ್ಯ ಛಿದ್ರವಾಯಿತು. ಇದರಿಂದ ಗ್ರೀಸ್ ದೇಶದಲ್ಲಿ ನೂರಾರು ನಗರ ರಾಜ್ಯಗಳು ಪುನಃ ತಲೆ ಎತ್ತಿದವು. ಸೆಲ್ಯೂಷಿಯ ಸಾಮ್ರಾಜ್ಯ ಅಲೆಗ್ಸಾಂಡರನ ಸಾಮ್ರಾಜ್ಯದ ಉತ್ತರಾಧಿಕಾರಿ ಎನಿಸಿಕೊಂಡರೂ ಮೊದಲಿನ ಸಾಮಥ್ರ್ಯ, ಒಟ್ಟುಗೂಡಿಸುವ ಶಕ್ತಿ ಅಲ್ಲಿಯ ಅರಸರಲ್ಲಿರಲಿಲ್ಲ. ಸಾಮಾನ್ಯವಾಗಿ ಗ್ರೀಸ್ ದೇಶದ ಪ್ರಾಚೀನ ಇತಿಹಾಸ ಅಲೆಗ್ಸಾಂಡರನೊಂದಿಗೆ ಅಂತ್ಯಗೊಳ್ಳುತ್ತದೆ ಎಂಬುದಕ್ಕೆ ಇದೊಂದು ಮುಖ್ಯ ಕಾರಣ. ಗ್ರೀಕ್ ನಗರರಾಜ್ಯಗಳಲ್ಲದೆ ಗ್ರೀಕ್ ಪದ್ಧತಿಯಿಂದ ಪ್ರಭಾವಿತಗೊಂಡ. ಗ್ರೀಕರದಂದೇ ಹೇಳಬಹುದಾದ ಇಎಪಿರಸ್, ಜುಡಿಯ, ಬಿeóÁಂಟಿಯಂ, ಇಟಲಿ, ಸಿಸಿಲಿ ಮುಂತಾದ ನಗರರಾಜ್ಯಗಳು ತಲೆಯೆತ್ತಿದುವು. ಸ್ಪಾರ್ಟ ನಗರ ಮ್ಯಾಸಿಡೋನಿಯದೊಡನೆ ಹೋರಾಡಿ ಗೆದ್ದಿತ್ತಾದರೂ ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಟ್ಟು, ಪ್ರಜೆಗಳಲ್ಲಿ ಆರ್ಥಿಕ ಅಸಮಾನತೆ ವಿಷಮಿಸಿ ಕ್ರಾಂತಿಯುಂಟಾಯಿತು. ಇಬ್ಬರು ರಾಜರಿಗೆ ಬದಲು 3 ನೆಯ ಕ್ಲಿಯಾಮೆನೀಸ್ ಅಧಿಕಾರಕ್ಕೆ ಬಂದ. ಆದರೂ ಇದರಿಂದ ಯಾವ ಹಿತವೂ ಉಂಟಾಗಲಿಲ್ಲ. ವರ್ಗ ಕಲಹ ಮುಂದುವರಿದು ಸರ್ವಾಧಿಕಾರಕ್ಕೆ ಎಡೆಮಾಡಿತು. ನಬಿಸ್ ಎಂಬಾತ ಸರ್ವಾಧಿಕಾರಿಯಾದ (ಕ್ರಿ.ಪೂ. 207). ಈತ ಬಡವರನ್ನು ಗುಲಾಮಗಿರಿಯಿಂದ ಮುಕ್ತಗೊಳಿಸಿ ಜಹಗೀರುದಾರರನ್ನು ಹೊರದೂಡಿ ಜಮೀನುಗಳನ್ನು ರಾಷ್ಟ್ರೀಕರಿಸಿದ. ಇವನ ಈ ಕ್ರಮ ಇವನಿಗೆ ಖ್ಯಾತಿಯನ್ನು ತಂದುದೇ ಅಲ್ಲದೆ ನೆರೆಯ ರಾಜ್ಯಗಳೂ ಇವನನ್ನು ನಾಯಕನಾಗಿ ಒಪ್ಪುವಂತೆ ಮಾಡಿತು. ಅಕೀಯನ್ ಲೀಗಿನ ಸರ್ವಾಧಿಕಾರಿಯಾದ ಈತನನ್ನು ಹೊರದೂಡಲು ಹೊಂಚುಹಾಕಿದ ಹಲವರು ರೋಮಿನ ಸಹಾಯ ಬಯಸಿದರು. ಆದರೆ ಇವನನ್ನು ಸೋಲಿಸಲಾಗಲಿಲ್ಲ. ಕೊನೆಗೆ ವಿಧಿ ಇವನನ್ನು ವಂಚಿಸಿತು. ಕೊಲೆಗಡುನೊಬ್ಬನಿಂದ ಈತ ಹತನಾದ. ಅನಂತರ ಉಂಟಾದ ಅವ್ಯವಸ್ಥೆಯ ಪರಿಣಾಮವಾಗಿ ಸ್ಪಾರ್ಟದಲ್ಲಿ ಕ್ರಾಂತಿಯಾಯಿತು. ಸ್ಪಾರ್ಟದ ಪ್ರತ್ಯೇಕ ಇತಿಹಾಸ ಕೊನೆಗೊಂಡಿತು (ಕ್ರಿ.ಪೂ. 188). 

	ಗ್ರೀಸಿನ ನಗರರಾಜ್ಯಗಳು 	ಕುಸಿದಾಗ ಒಂದು ಕಡೆ ಸೆಲ್ಯೂಸಿಡ್ ಸಾಮ್ರಾಜ್ಯ. ಇನ್ನೊಂದು ಕಡೆ ರೋಮಿನ ಪ್ರಭಾವ ಗ್ರೀಕರನ್ನು ಆಹ್ವಾನಿಸುತ್ತಿತ್ತು. ಸೆಲ್ಯೂಸಿಡ್ ಸಾಮ್ರಾಜ್ಯ ಹೆಚ್ಚಾಗಿ ಏಷ್ಯಕ್ಕೆ ಸೀಮಿತವಾಗಿತ್ತು. ಗ್ರೀಕ್ ಸಂಸ್ಕøತಿ ತನ್ನ ಪ್ರಬಾವವನ್ನು ಅದರ ಮೇಲೆ ಬೀರಿದ್ದರೂ ಪೌರಸ್ತ್ಯ ಸಂಸ್ಕøತಿಯ ಅದನ್ನು ಮೈಗೂಡಿಸಿಗೊಂಡಿತೇ ಹೊರತು ತನ್ನ ವ್ಯಕ್ತಿತ್ತ್ವವನ್ನು ಕಳೆದುಕೊಳ್ಳಲಿಲ್ಲ. ಗ್ರೀಕ್ ಜನ ತಮ್ಮ ಪ್ರತ್ಯೇಕತೆಯನ್ನುಳಿಸಿಕೊಳ್ಳುವುದು ಸಾಧ್ಯವಿರಲಿಲ್ಲ. ರೋಂ ಪ್ರಬಲವಾಗುತ್ತಿದ್ದಾಗ ಕೊನೆಗೆ ಗ್ರೀಸ್ ರೋಮಿನ ಕಡೆ ಒಲಿದುದಕ್ಕೆ ಇದೊಂದು ಮುಖ್ಯ ಕಾರಣ. ಮೊದಮೊದಲು ರೋಮಿನ ಸಾರ್ವಭೌಮತ್ವವನ್ನು ಗ್ರೀಸ್ ವಿರೋಧಿಸಿತು. ಗ್ರೀಸಿನಲ್ಲಿ ಪ್ರಾಬಲ್ಯ ಪಡೆದಿದ್ದ ಅಕೀಯನ್ ಲೀಗಿನ ಕೇಂದ್ರವಾದ ಕಾರಿಂತ್ ಪಟ್ಟಣವನ್ನು ಕ್ರಿ.ಪೂ. 146ರಲ್ಲಿ ರೋಮನರು ಸ್ವಾಧೀನಪಡಿಸಿಕೊಂಡರು. ಇದರೊಂದಿಗೆ ಗ್ರೀಸ್ ತನ್ನ ಅಸ್ತಿತ್ವವನ್ನು ಕಳೆದುಕೊಂಡಿತು. ಆದರೆ ಗ್ರೀಕ್ ಸಂಸ್ಕøತಿ ಮುಂದಿನ ಪಾಶ್ಚಾತ್ಯ ಸಂಸ್ಕøತಿಗೆ ತಳಹದಿಯಾಯಿತು. 

	ಗ್ರೀಸಿನ ಆಡಳಿತವನ್ನು ರೋಮನ್ ಸೇನೆಟ್ ವಹಿಸಿತು. ತನ್ನ ಪ್ರತನಿಧಿಗಳ ಮೂಲಕ ಗ್ರೀಸಿನ ಮೇಲೆ ಸಾರ್ವಭೌಮತ್ವವನ್ನು ಸ್ಥಾಪಿಸಿತು. ಆಥೆನ್ಸ್ ಸ್ಪಾರ್ಟ ಮೊದಲಾದ ಖ್ಯಾತಿವೆತ್ತ ನಗರಗಳಿಗೆ ಮಾತ್ರ ಸ್ವತಂತ್ರವಾದ ಆಡಳಿತ ವ್ಯವಸ್ಥೆಯನ್ನಿರಿಸಿಕೊಳ್ಳಲು ಅನುಮತಿಯನ್ನು ಕೊಡಲಾಯಿತು. ಉಳಿದಂತೆ ಮ್ಯಾಸಿಡೋನಿಯದ ಪ್ರಾಂತ್ಯಾಧಿಕಾರಿ ಮೇಲ್ವಿಚಾರಕನಾಗಿದ್ದ. ಜೂಲಿಯಸ್ ಸೀಸರ್ ಪಾಂಪೆ ಇವರ ನಡುವಣ ಹೋರಾಟದಲ್ಲಿ ಗ್ರೀಕರು ಪಾಂಪೆಯ ಬೆಂಬಲಿಗರಾದರು. ಅಂತಿಮವಾಗಿ ಜನಶೀಲನಾದ ಸೀಸರ್ ಗ್ರೀಕಕರನ್ನು ಸೌಹಾರ್ದದಿಂದಲೇ ಕಂಡ. ಅವನ ಕೊಲೆಯ ಬಳಿಕ ಬಂದವರು ಗ್ರೀಕರನ್ನು ಸುಲಿಗೆ ಮಾಡಿದರು. 

	ಸಾಮ್ರಾಟನೆನಿಸಿದ ಆಗಸ್ಟಸ್ ಆಡಳಿತ ಸುಧಾರಣೆಗಳನ್ನು ಜಾರಿಗೆ ತಂದ. ತೆಸಲಿ ಮತ್ತು ಮ್ಯಾಸಿಡೋನಿಯಗಳು ಈಗ ಒಟ್ಟುಗೂಡಿದವು. ಗ್ರೀಸ್ ದೇಶದ ಉಳಿದ ಭಾಗಗಳು ಕಾರಿಂತ್ ನಗರದಲ್ಲಿಯ ಪ್ರೊ-ಕಾನ್ಸಲನ ಆಡಳಿತದ ವ್ಯಾಪ್ತಿಗೆ ಒಳಪಟ್ಟುವು. ಆಥೆನ್ಸ್ ಮುಂತಾದ ನಗರಗಳು ಮಾತ್ರ ಮೊದಲಿನಂತೆ ಸ್ವತಂತ್ರ ಆಡಳಿತ ಪಡೆದಿದ್ದವು. ಆದರೂ ಇದರಿಂದ ಗ್ರೀಕರ ಆರ್ಥಿಕ ಪರಿಸ್ಥಿತಿ ಸುಧಾರಿಸಲಿಲ್ಲ. ಅವರ ಹಿತಗಳು ರಕ್ಷಿಸಲ್ಪಡಲಿಲ್ಲ. 

	ಕ್ರಿ.ಶ. 2-3ನೆಯ ಶತಮಾನಗಳಲ್ಲಿ ಗ್ರೀಕ್ ಪರಕೀಯರ ದಾಳಿಗಳಿಗೆ ತುತ್ತಾಯಿತು. ಇವರಲ್ಲಿ ಗಾತಿಕ್ ಜನರು ಪ್ರಮುಖರು. ಕಾನ್ಸ್ಟನ್‍ಟೈನ್ ಚಕ್ರವರ್ತಿ ಗ್ರೀಸನ್ನು ಆಡಳಿತ ದೃಷ್ಟಿಯಿಂದ ಮತ್ತೊಮ್ಮೆ ಬೇರೆಬೇರೆ ಗುಂಪುಗಳಾಗಿ ವಿಂಗಡಿಸಿ ಹಲವಾರು ಸುಧಾರಣೆಗಳನ್ನು ಮಾಡಿದವನಾದರೂ ಗ್ರೀಕ್ ಜನ ಮಾತ್ರ ತಮ್ಮ ಗತವೈಭವವನ್ನು ಮೆಲುಕು ಹಾಕುವುದರಲ್ಲೆ ತೃಪ್ತಿ ಹೊಂದಬೇಕಾಯಿತು. 4 ನೆಯ ಶತಮಾನದ ಅಂತ್ಯದಲ್ಲಿ ಆಲರಿಕನ ನೇತೃತ್ವದಲ್ಲಿ ವಿಸಿಗಾತರು, 5 ನೆಯ ಶತಮಾನದ ಅಂತ್ಯದಲ್ಲಿ ಆಸ್ಟ್ರೊಗಾತರು ಮುಂದಿನ ಶತಮಾನದಲ್ಲಿ ಹೂಣರು, ಅನಂತರ ಸ್ಲಾವ್ ಜನಾಂಗದವರು ಗ್ರೀಸ್ ದೇಶವನ್ನು ಮುತ್ತಿದರು. ಈ ದಾಳಿಗಳು 12-13 ನೆಯ ಶತಮಾನಗಳವರೆಗೂ ಮುಂದುವರಿಯುತ್ತಲೇ ಇದ್ದುವು. 

	ತುರ್ಕಿಯ ಸುಲ್ತಾನ ಇಮ್ಮಡಿ ಮಹಮ್ಮದ ಕೊನೆಯ ಬಿeóÁಂಟಿನ್ ಚಕ್ರವರ್ತಿ 11 ನೆಯ ಕಾನ್ಸ್ಟನ್‍ಟೈನನನ್ನು ಸೋಲಿಸಿ ಕಾನ್ಸ್ಟಾಂಟಿನೋಪಲ್ ನಗರವನ್ನು ಆಕ್ರಮಿಸಿದಾಗ (1453) ತಾತ್ತ್ವಿಕವಾಗಿ ಗ್ರೀಸ್ ಅವನ ಅಧೀನಕ್ಕೆ ಬಂತು. ಆದರೂ ಹಲವಾರು ನಗರಗಳು ಆ ಪರಿಸ್ಥಿತಿಯ ಪ್ರಯೋಜನ ಪಡೆದು ಸ್ವತಂತ್ರವಾಗಿ ಇನ್ನೂ ಸ್ವಲ್ಪ ಕಾಲ ಉಳಿದುವು. ರೋಡ್ಸ್ 1522ರಲ್ಲಿ ಸೈಪ್ರಸ್ 1571ರಲ್ಲಿ, ಕ್ರೀಟ್ 1669ರಲ್ಲಿ ಆಟೋಮನ್ ಸಾಮ್ರಾಜ್ಯದ ಅಧೀನವಾದುವು. ಇದು ಒಂದು ದೃಷ್ಟಿಯಲ್ಲಿ ಗ್ರೀಕರಿಗೆ ಸಾಧಾನವನ್ನು ತಂದಿತು. ತುರ್ಕಿ ಸುಲ್ತಾನ ಇಡೀ ರಾಜ್ಯದ ಅಧಿಪತಿ. ಅವನ ಸ್ವಾಧೀನನದಲ್ಲಿದ್ದ ಎಲ್ಲ ಭೂಮಿಯ ಒಡೆತನವೂ ಅವನದೇ. ಪ್ರಜೆಗಳು ಅವನಿಗೆ ತೆರಿಗೆ ತೆತ್ತು ಅವನಿಂದ ಜಮೀನ ಸಾಗುವಳಿಗೆ ಪಡೆಯಬಹುದಿತ್ತು. ಗ್ರೀಕರು ಅವನಿಗೆ ಹಲವಾರು ತೆರಿಗೆಗಳನ್ನು ಕೊಟ್ಟು ತನ್ಮೂಲಕ ಸ್ವತಃ ನೆಮ್ಮದಿ ಕಾಪಾಡಿಕೊಳ್ಳಬಹುದಿತ್ತು. ಆಡಳಿತಾಧಿಕಾರಿಗಳು ಬಹಳಮಟ್ಟಿಗೆ ಇವರ ದೈನಂದಿನ ವ್ಯವಹಾರಗಳಲ್ಲಿ ಪ್ರವೇಶಿಸುತ್ತಿರಲಿಲ್ಲ. ಇದರಿಂದ ಇವರು ಸ್ವಧರ್ಮವನ್ನು ಅವಲಂಬಿಸಬಹುದಾಗಿತ್ತು. ಗ್ರೀಕರು ಅದುವರೆಗೂ ಎದುರಿಸಿದ್ದ ದಾಳಿಕಾರರ ತೊಂದರೆಗಳು ದಕ್ಷ ಆಡಳಿತದಿಂದ ಕೊನೆಗೊಂಡಿದ್ದುವು. ರೋಮನ್ ಕ್ಯಾತೊಲಿಕ್ ಪಂಗಡದವರ ಒತ್ತಡದಿಂದ ಇವರು ಮುಕ್ತರಾಗಿದ್ದರು. ಇವು ತುರ್ಕಿ ಆಡಳಿತದಿಂದಾಗಿ ಇವುರ ಪಡೆದ ಲಾಭಗಳೆನ್ನಬಹುದು. ಆದರೆ ಇವೇ ಮುಂದೆ ಗ್ರೀಕರು ಸ್ವತಂತ್ರರಾಗಲು ಹೂಡಿದ ಕದನಕ್ಕೆ ಪ್ರೇರಕವಾದುವು ಎಂಬುದೂ ಗಮನಾರ್ಹ. ಇಷ್ಟೆಲ್ಲ ಸೌಲಭ್ಯಗಳಿದ್ದರೂ ಗ್ರೀಕ್ ಪ್ರಜೆಗಳಿಗೆ ಆಡಳಿತಾಧಿಕಾರದ ಅವಕಾಶವಿರಲಿಲ್ಲ. ಅವರಿಗೆ ಯಾವ ವಿಧವಾದ ಪೌರಹಕ್ಕುಗಳೂ ಇರಲಿಲ್ಲ. ಎಲ್ಲ ಅಧಿಕಾರವೂ ಸುಲ್ತಾನನಲ್ಲಿ ಕೇಂದ್ರಿಕೃತವಾಗಿತ್ತಾದ್ದರಿಂದ ಅದಕ್ಷ ಸುಲ್ತಾನ ಅಧಿಕಾರಕ್ಕೆ ಬಂದಾಗ ಆಡಳಿತ ಸಡಿಲಗೊಂಡು ಅನೇಕರು ಸ್ವೇಚ್ಛಾನುವರ್ತಿಗಳಾಗಿ ಸ್ವಾಧಿಕಾರವನ್ನು ಹೆಚ್ಚಿಸಿಕೊಳ್ಳುವುದು ಸಾಧ್ಯವಾಗುತ್ತಿತ್ತು. ಈ ಸಂಧರ್ಭಗಳನ್ನು ಉಪಯೋಗಸಿಕೊಂಡು ಹಲವು ಗ್ರೀಕರು ಕ್ರಮೇಣ ಆಡಳಿತದ ಅಧಿಕಾರಿಯಗಳಾಗಿ ತಮ್ಮ ಪ್ರಭಾವವನ್ನು ಬೆಳೆಸಿ ಕೊಂಡರು. ಗ್ರೀಕ್ ಕಜನ ಸ್ವಾತಂತ್ರ್ಯಕ್ಕಾಗಿ ಹೋರಾಡಲು ಪರೋಕ್ಷವಾದ ಪ್ರೋತ್ಸಾಹವನ್ನೂ ಇವರು ಕೊಟ್ಟರು. 

	ಪ್ರಬಲ ರಾಷ್ಟ್ರಗಳಲ್ಲಿ ಒಂದೆಂದು ಕ್ರಮೇಣ ಪರಿಗಣಿತವಾಗುತ್ತಿದ್ದ ರಷ್ಯಕ್ಕೆ ಕಾನ್‍ಸ್ಸ್ಟಾಂಟಿನೋಪಲಿನೊಡನೆ ನಿಕಟಸಂಪರ್ಕ ಹೊಂದುವುದು ಅವಶ್ಯವಾಯಿತು. ಯೂರೋಪಿಗೆ ಅದು ಹೆಬ್ಬಾಗಿಲಿನಂತಿತ್ತು. ಆದ್ದರಿಂದ ರಷ್ಯನರು ಗೀಕರ ಸ್ವಾತಂತ್ರ್ಯಾಪೇಕ್ಷೆಯ ಬೆಂಕಿಗೆ ತುಪ್ಪವನ್ನು ಸುರಿದರು. ರಷ್ಯದ ರಾಣಿ ಕ್ಯಾಥರಿನಳ ಪ್ರೋತ್ಸಾಹದಿಂದ 1771ರಲ್ಲಿ ಮೊದಲ ದಂಗೆ ಸಂಭವಿಸಿತು. ಆದರೆ ಇದನ್ನು ಪ್ರೇರೇಪಿಸಿದ ರಷ್ಯನರು ಸದ್ದುಗದ್ದಲವಿಲ್ಲದೆ ಹಿಂಜರಿದದ್ದು ಗ್ರೀಕರ ಮನವನ್ನು ನೋಯಿಸಿದರೂ ಇದು ಮುಂದಿನ ಘಟನೆಗಳಿಗೆ ನಾಂದಿಯಾಯಿತು. ಯೂರೋಪಿನ ಇತರ ರಾಷ್ಟ್ರಗಳೂ ಈಗ ಗ್ರೀಸಿನಲ್ಲಿ ಆಸಕ್ತಿ ವಹಿಸಿದುವು. ಇವುಗಳಲ್ಲಿ ಆಸ್ಟ್ರಿಯ, ಫ್ರಾನ್ಸ್ ಮತ್ತು ಇಂಗ್ಲೆಂಡ್ ಪ್ರಮುಖವಾದವು. ಇವು ಯಾವುವೂ ಗ್ರೀಸಿನ ಹಿತೈಷಿಗಳಾಗಿರದೆ, ಯೂರೋಪಿನ ರಾಜಕೀಯ ಚದುರಂಗದಲ್ಲಿ ಆಸಕ್ತಿ ವಹಿಸಿದ್ದು ಗ್ರೀಸನ್ನು ತಮಗನುಕೂಲವಾಗುವಂತೆ ಒಂದು ಕಾಯದೆಯಾಗಿ ಉಪಯೋಗಿಸಿದವೆಂಬುದು ಸ್ಪಷ್ಟ. ಅಂತೂ ಅಂದಿನ ಪ್ರಬಲ ರಾಜ್ಯಗಳೆಲ್ಲ ಗ್ರೀಸಿನ ಆಗುಹೋಗುಗಳಲ್ಲಿ ಆಸಕ್ತಿ ವಹಿಸಿದಂತಾಗಿತ್ತು. 

	1821ರಲ್ಲಿ ಗ್ರೀಕ್ ಸ್ವಾತಂತ್ರ್ಯ ಸಂಗ್ರಾಮ ಆರಂಭವಾಯಿತು. ಡ್ಯಾನ್ಯೂಬ್ ಪ್ರಾಂತ್ಯಗಳಲ್ಲಿ, ಮೊರಿಯದಲ್ಲಿ ದಂಗೆ ಕಾಣಿಸಿಕೊಂಡಿತು. ಅಲೆಗ್ಸಾಂಡರ್ ಇಪ್ಸಿಲಾಂಟಿ ಮೊದಲು ಮಾಲ್ಡೇವಿಯದಲ್ಲಿ ದಂಗೆ ಎದ್ದನಾದರೂ ಪ್ರಜಾಬೆಂಬಲವಿಲ್ಲದ ಕಾರಣ ಈ ದಂಗೆ ಅಡಗಿತು. ಆದರೆ 6ನೆಯ ಏಪ್ರಿಲ್ 1921ರಂದು ಪಟ್ರ್ಯಾಸಿನ ಆರ್ಚ್ ಬಿಷಪ್ ಆದ ಜರ್ಮನೊಸ್ ಸ್ವತಂತ್ರ ಗೀಸಿನ ಧ್ವಜವನ್ನು ಹಾರಿಸಿದಾಗ ಈ ಸಂಗ್ರಾಮ ಪ್ರಾರಂಭವಾಯಿತೆನ್ನಬೇಕು. ಇಂದಿಗೂ ಆ ದಿನವನ್ನು ಸ್ವಾತಂತ್ರ್ಯದಿನವೆಂದು ಪರಿಗಣಿಸಲಾಗಿದೆ. ರಷ್ಯ, ಇಂಗ್ಲೆಂಡ್, ಫ್ರಾನ್ಸ್‍ಗಳು ತಮ್ಮ ಸಹಾನುಭೂತಿಯನ್ನು ವ್ಯಕ್ತಪಡಿಸಿದುವು. ಮೂರು ರಾಷ್ಟ್ರಗಳೂ ಗ್ರೀಕ್ ಮತ್ತು ತುರ್ಕರ ನಡುವೆ ಸಂಧಾನವನ್ನೇರ್ಪಡಿಸಲು ಕೂಡಿ ಮುಂದೆ ಬಂದುವು. ತುರ್ಕರು ಇದಕ್ಕೆ ಸಿದ್ಧವಿರಲಿಲ್ಲ. ಪರಿಣಾಮವಾಗಿ 1827ರಲ್ಲಿ ನವಾರಿನೋದ ಘೋರಕದನದಲ್ಲಿ ತುರ್ಕಿ ನೌಕೆ ಸೋಲು ಅನುಭವಿಸಿತು. 1829ರಲ್ಲಿ ಅಲಗ್ಸಾಂಡರನ ಸೋದರ ಡೆಮೆಟ್ರಿಯಸ್ ಎಸ್ಪಿಲಾಂಜಿ ತೀಬ್ಸ್ ಹಾಗೂ ಲಿಡಿಯಗಳ ನಡುವಣ ಕಣಿವೆಯಲ್ಲಿ ಸೇನೆಯನ್ನು ಹೊಡೆದಟ್ಟಿದ. ಆಡ್ರಿಯಾನೋಪಲ್ ಶಾಂತಿಕೌಲಿನ ಪರಿಣಾಮವಾಗಿ ಸ್ವತಂತ್ರ ಗ್ರೀಸ್ ರಾಜ್ಯ ಉದಿಸಿತು. ಆದರೆ ಐಯೋನಿಯನ್ ದ್ವೀಪಗಳು, ಕ್ರೀಟ್, ತೆಸಲಿ ಮುಂತಾದವು ಆ ರಾಜ್ಯದ ಹೊರಗೇ ಉಳಿದುವು. ಬವೇರಿಯದ ಆಟೋ ಈ ರಾಜ್ಯದ ಮೊದಲ ಅರಸನಾದ(1835-62). 1862ರಲ್ಲಿ ಸೈನಿಕ ಕ್ರಾಂತಿಯುಂಟಾಗಿ ಡೇನಿಷ್ ರಾಜಕುಮಾರನಾದ ಜಾರ್ಜನಿಗೆ ಸಿಂಹಾಸನದಕ್ಕಿತು. ಈತ 50 ವರ್ಷಗಳ ಕಾಲ (1863-1913) ಆಳಿದ. ಆಗ ರಾಜ್ಯ ವಿಸ್ತಾರಗೊಂಡಿತು. 1863ರಲ್ಲಿ ಐಯೋನಿಯನ್ ದ್ವೀಪಗಳೂ 1881ರಲ್ಲಿ ತೆಸಲಿ ಮತ್ತು ಎಪಿರಸಿನ ಕೆಲವು ಭಾಗಗಳೂ 1913ರಲ್ಲಿ ಕ್ರೀಟ್, ಮ್ಯಾಸಿಡೋನಿಯ ಮತ್ತು ತ್ರೇಸಿನ ಭಾಗಗಳೂ ಈ ರಾಜ್ಯಕ್ಕೆ ಸೇರಿದುವು. ಇವುಗಳಿಗಾಗಿ ತುರ್ಕಿಯೊಡನೆ ಕಾದಾಟವಾಯಿತು. ಇವು ಬಾಲ್ಕನ್ ಕದನಗಳೆಂದು ಇತಿಹಾಸದಲ್ಲಿ ಪ್ರಸಿದ್ಧವಾಗಿವೆ. 

	ಒಂದನೆಯ ಮಹಾಯುದ್ದದಲ್ಲಿ ರಾಜ ಕಾನ್‍ಸ್ಟಂಟೈನ್ ತಟಸ್ಥ ನೀತಿ ಅವಲಂಬಿಸಿದ. ಇವನ ಪ್ರಧಾನಿ ವೆನಿeóÉಲಸ್ ಮಿತ್ರ ರಾಷ್ಟ್ರಗಳನ್ನು ಸೇರಬಯಸಿದ್ಧ. ಇವರ ನಡುವಣ ಭಿನ್ನಾಭಿಪ್ರಾಯಗಳು ತೀವ್ರರೂಪ ತಾಳಿದುವು. ವೆನಿಜûಲಸ್ ತನ್ನ ಅಧಿಕಾರಕ್ಕೆ ರಾಜೀನಾಮೆ ಸಲ್ಲಿಸಿದನಾದರೂ ಅನಂತರ ನಡೆದ ಕ್ಷಿಪ್ರಾಕ್ರಮಣವೊಂದಕ್ಕೆ ಕಾರಣನಾದ ಕಾನ್‍ಸ್ಟಂಟೈನ್ ಪದಚ್ಯುತನಾದ. (1917). ವೆನಿeóÉಲಸ್ ಪುನಃ ಪ್ರಧಾನಿಯಾಗಿ ಆಥೆನ್ಸಿಗೆ ಹಿಂದಿರುಗಿದ. ಮಹಾಯುದ್ದದ ಬಳಿಕ ನಡೆದ ಪ್ಯಾರಿಸ್ ಶಾಂತಿ ಸಂಧಾನಗಳಲ್ಲಿ ಇವನು ಪ್ರಮುಖ ಪಾತ್ರ ವಹಿಸಿದ್ದ. ಆದರೆ ಆನಟೋಲಿಯವನ್ನು ಪಡೆಯುವ ಇವನ ಪ್ರಯತ್ನಗಳು ವಿಫಲಗೊಂಡುವು. 1924ರಲ್ಲಿ ಗ್ರೀಸ್ ಒಂದು ಗಣರಾಜ್ಯವಾಯಿತಾದರೂ 1935ರಲ್ಲಿ ಇಲ್ಲಿ ಪುನಃ ರಾಜತ್ವ ಸ್ಥಾಪಿತವಾಯಿತು. ಇಮ್ಮಡಿ ಜಾರ್ಜ್ ಅರಸನಾದ. ಆದರೆ ವಾಸ್ತವಿಕವಾಗಿ ಅಧಿಕಾರ ಜನರಲ್ ಮೆಟಾಕ್ಸಾಸನಲ್ಲಿ ಕೇಂದ್ರಿಕೃತವಾಯಿತು. ಈ ಸರ್ವಾಧಿಕಾರಿ 1941ರ ವರೆಗೂ ಇದ್ದ. ಆ ವರ್ಷ ಜರ್ಮನಿ ಗ್ರೀಸನ್ನು ಮುತ್ತಿತ್ತು. 1944ರ ವರೆಗೂ ಜರ್ಮನರು, ಗ್ರೀಸಿನ ಅರಸರ ಬೆಂಬಲಿಗರು ಮತ್ತು ಕಮ್ಯೂನಿಸ್ಟರ ನಡುವೆ ಗೆರಿಲ ಕದನ ನಡೆಯಿತು. ಈ ಅಂತಃಕಲಹಗಳಲ್ಲಿ ಬ್ರಿಟನ್ ಭಾಗವಹಿಸಿ ಆಥೆನ್ಸನ್ನು ಮುಕ್ತಗೊಳಿಸಿತು. ಆದರೆ ಪುನಃ 1946ರಿಂದ 1949ರ ವರೆಗೆ ಕದನಗಳು ನಡೆದು ಕೊನೆಗೆ ಅರಸನ ಬೆಂಬಲಿಗರು ಗೆದ್ದರು. ಅರಸನನ್ನು ಅಧಿಕಾರದಲ್ಲಿ ನೆಲೆಗೊಳಿಸಿದರು. 1950ರ ಅನಂತರ ಗ್ರೀಕ್ ರಾಜಕೀಯ ಸೈಪ್ರಸ್ ಪ್ರಶ್ನೆಯಲ್ಲಿ ಸಿಲುಕಿಕೊಂಡಿತು. ಸೈಪ್ರಸ್ ದ್ವೀಪದಲ್ಲಿಯ ಗ್ರೀಕ್ ಜನ ಗ್ರೀಸಿನೊಡನೆ ಸೈಪ್ರಸ್ ಸೇರಿಕೊಳ್ಳಬೇಕೆಂದು ಬಯಸಿ ಅದಕ್ಕಾಗಿ ಚಳವಳಿ ಹೂಡಿದರು. ಈ ಚಳವಳಿ 1954ರಲ್ಲಿ ತೀವ್ರರೂಪ ತಾಳಿ, 1960ರಲ್ಲಿ ಪ್ರತ್ಯೇಕವಾದ ಸ್ವತಂತ್ರ ಸೈಪ್ರಸ್ ಗಣರಾಜ್ಯದ ಸ್ಥಾಪನೆಯೊಂದಿಗೆ ಮುಗಿಯಿತು. 

	1960 ರ ಅನಂತರ ಗ್ರೀಸ್-ಬ್ರಿಟನ್‍ಗಳ ನಡುವಣ ಬಾಂಧವ್ಯ ಸೌಹಾರ್ದಯುತವಾಯಿತು. ಈ ಮಧ್ಯೆ 1955 ರಿಂದ ನಿರಂತರವಾಗಿ ಪ್ರಧಾನಿ ಪದವಿಗೆ ಆಯ್ಕೆಗೊಳ್ಳುತ್ತಿದ್ದ ಕರಮನ್ಲಿಸ್ 1963ರಲ್ಲಿ ಗ್ರೀಕ್ ರಾಜದಂಪತಿಗಳು ಲಂಡನಿಗೆ ಭೇಟಿ ಕೊಡುವುದನ್ನು ಪ್ರತಿಭಟಿಸಿ ರಾಜೀನಾಮೆಯನ್ನಿತ್ತ. ಅಂದಿನಿಂದ ಅಲ್ಲಿ ಸುಭದ್ರ ಸರ್ಕಾರಸ್ಥಾಪನೆಗೆ ಅಡಚಣೆಗಳುಂಟಾಗುತ್ತಲೇ ಬಂದುವು. 1963ರಲ್ಲಿ ಒಂದು ಕ್ಷಿಪ್ರಾಕ್ರಮಣವಾಗಿ ಅರಸ ರೋಮ್‍ಗೆ ತಪ್ಪಿಸಿಕೊಂಡು ಹೋದ. ಆತನ ಅಧಿಕಾರಗಳನ್ನು ರೀಜೆಂಟ್ ಎನಿಸಿಕೊಂಡ ಜೊಟಾಕಿಸ್ ವಹಿಸಿಕೊಂಡ. ಮೊದಲು ಕೊಲ್ಲಿಯಸನೂ ಅನಂತರ ಸ್ಯನ್ಯಾಧಿಕಾರಿ ಪಪಡೊಪೌಲೊಸನೂ ಪ್ರಧಾನಿ ಪದವಿಗೆ ಏರಿದರು. ಅರಸ ಗ್ರೀಸಿಗೆ ಹಿಂದಿರುಗಲು ಸಂಧಾನಗಳಾದುವು. 1968ರಲ್ಲಿ ಹೊಸ ಸಂವಿಧಾನವೊಂದನ್ನು ರೂಪಿಸಿ ಪ್ರಕಟಿಸಲಾಯಿತು. ಇದಕ್ಕೆ ಪ್ರಜೆಗಳ ಬಹುಮತದ ಬೆಂಬಲ ದೊರಕಿತು. ಆದರೆ ಸೈನಿಕ ಸರ್ಕಾರ ಈ ಸಂವಿಧಾನವನ್ನು 1970ರಲ್ಲೂ ಜಾರಿಗೆ ತರಲಿಲ್ಲ. ಇದರಿಂದ ಜನರಿಗೆ ಈ ಸರ್ಕಾರದ ಸ್ಪಷ್ಟವಾದ ಉದ್ದೇಶವೇನೆಂಬುದು ತಿಳಿಯದೆ ಹೋಯಿತು. ಅರಸನಾಗಿದ್ದ 2 ನೆಯ ಕಾನ್‍ಸ್ಟಂಟೈನನ ಬೆಂಬಲಿಗರು ಕ್ರಮೇಣ ಈ ಸರ್ಕಾರದ ಕ್ರಮಗಳ ವಿರುದ್ಧ ಹೋರಾಟ ಆರಂಭಿಸಿದರು. ತನ್ನನ್ನು ಬೆಂಬಲಿಸಿದ ಸಂಘ-ಸಂಸ್ಥೆಗಳೊಡನೆ ಯಾವ ಸಂಬಂಧಗಳನ್ನೂ ಹೊಂದಿರಕೂಡದೆಂದೂ ವಿನಾಶಕೃತ್ಯಗಳಲ್ಲಿ ತೊಡಗಕೂಡದೆಂದು ಅವಕ್ಕೆ ಆದೇಶ ನೀಡಬೇಕೆಂದೂ ಸರ್ಕಾರ ಅರಸನ ಮೇಲೆ ಒತ್ತಾಯವನ್ನು ತಂದಿತು. ಅಲ್ಲದೆ ವಿಶ್ವಸಂಸ್ಥೆ ರಾಜ್ಯದ ಆಂತರಿಕ ವಿಷಯಗಳಲ್ಲಿ ತಲೆಹಾಕುತ್ತಿದೆಯೆಂದು ಆರೋಪಿಸಿ, ಆ ನೀತಿ ಮುಂದುವರಿದಲ್ಲಿ ಅಮೆರಿಕನರ ಪ್ರಾಣಕ್ಕೂ ಸಂಪತ್ತಿಗೂ ಹಾನಿ ಉಂಟಾಗಬಹುದೆಂದು ಎಚ್ಚರಿಸಿತು. 

	ಹಿಂದೆ ಪ್ರಧಾನಿಯಾಗಿದ್ದ ಕರಮನ್ಲಿಸ್ ಅಧಿಕಾರ ವಹಿಸಿಕೊಂಡರೆ ಪರಿಸ್ಥಿತಿ ಉತ್ತಮಗೊಳ್ಳುವುದೆಂದು ಈ ಮಧ್ಯೆ ಅನೇಕ ಗ್ರೀಕ್ ರಾಜಕಾರಣಿಗಳು ಅಭಿಪ್ರಾಯ ವ್ಯಕ್ತಪಡಿಸಿದರು. ಪ್ಯಾರಿಸಿನಲ್ಲಿದ್ದ ಆತ ಅದಕ್ಕನುಗುಣವಾಗಿ ಒಂದು ಹೇಳಿಕೆ ನೀಡಿದ. ಪ್ರಜಾಪ್ರಭುತ್ವವನ್ನು ಆಚರಣೆಗೆ ತರದಿದ್ದ ಕಾರಣ ಯೂರೋಪ್ ಮಂಡಲಿಯಿಂದ (ಕೌನ್ಸಿಲ್ ಆಫ್ ಯೂರೋಪ್) ಹೊರದೂಡಲ್ಪಡುವ ಶಂಕೆ ತೋರಿದಾಗ ಗ್ರೀಸ್ ತಾನಾಗಿಯೇ ಆ ಸಂಘದ ಸದಸ್ಯತ್ವವನ್ನು ಹಿಂತೆಗೆದುಕೊಂಡಿತು(1971). 

	ಜೂನ್ 1973ರಲ್ಲಿ ಗ್ರೀಕ್ ಪ್ರಧಾನಿ ಜಾರ್ಜ್ ಪಪಡೊಪೌಲೊಸ್ ಗ್ರೀಸ್ ಗಣರಾಜ್ಯವಾಗುವುದೆಂದು ಘೋಷಿಸಿದ. ಎರಡು ತಿಂಗಳುಗಳೊಳಗೆ ರಾಜ್ಯದಲ್ಲಿ ಪ್ರಜಾಭಿಮತ ಪಡೆಯುವುದಾಗಿಯೂ ಘೋಷಿಸಲಾಯಿತು. ತನ್ಮೂಲಕ 1974ರ ಅಂತ್ಯದ ವೇಳೆಗೆ ಹೊಸ ಪಾರ್ಲಿಮೆಂಟಿಗಾಗಿ ಚುನಾವಣೆಗಳು ನಡೆಯುವುವೆಂದು ತಿಳಿಸಿ ಅಲ್ಲಿಯವರೆಗೂ ಗ್ರೀಕ್ ಗಣರಾಜ್ಯಕ್ಕೆ ತಾನೇ ಅಧ್ಯಕ್ಷನೆಂದೂ ಸಾರಿಕೊಂಡ. ಗ್ರೀಸಿನಲ್ಲಿ ಅಸ್ತಿತ್ವದಲ್ಲಿದ್ದ 11 ವರ್ಷಗಳ ರಾಜತ್ವ ಕೊನಗೊಂಡಿತು.
(ಆರ್.ಪಿ.; ಜಿ.ಬಿ.ಆರ್.; ಎ.ಎಂ.ಆರ್.)
(ಆರ್.ಆರ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ